ದೇಶ

ಪಾಕ್-ಚೀನಾ ವಿಶೇಷ ಆರ್ಥಿಕ ಯೋಜನೆಗೆ ಭಾರತದ ಅಡ್ಡಗಾಲು: ಪಾಕ್ ಆರೋಪ

Srinivasamurthy VN

ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಚೀನಾ ದೇಶಗಳು ನಡೆಸಲು ಉದ್ದೇಶಿಸಿರುವ ಪಾಕ್-ಚೀನಾ ವಿಶೇಷ ಆರ್ಥಿಕ ಯೋಜನೆಯನ್ನು ಹಾಳುಗೆಡವಲೆಂದೇ ಭಾರತದ ಗುಪ್ತಚರ ಸಂಸ್ಥೆ "ರಾ"  ವಿಶೇಷ ಘಟಕವೊಂದನ್ನು ಸ್ಥಾಪಿಸಿದೆ ಎಂದು ಪಾಕಿಸ್ತಾನ ಸರ್ಕಾರ ಆರೋಪಿಸಿದೆ.

ಪಾಕಿಸ್ತಾನದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಅಲಂ ಖಟ್ಟಕ್ ಅವರು ಭಾರತದ ವಿರುದ್ಧ ಇಂತಹ ಗಂಭೀರ ಆರೋಪ ಮಾಡುತ್ತಿದ್ದು, ಭಾರತದ ಗುಪ್ತಚರ ಸಂಸ್ಥೆ "ರಾ" ಆಪ್ಘಾನಿಸ್ತಾನ  ಮೂಲಕವಾಗಿ ತನ್ನ ಈ ಯೋಜನೆಯನ್ನು ಕಾರ್ಯಗತ ಮಾಡಲು ಯೋಜಿಸಿದೆ ಎಂದು ಅವರು ಆರೋಪಿಸಿದ್ದಾರೆ.

"ಭಾರತದ ಗುಪ್ತಚರ ಸಂಸ್ಥೆ "ರಾ" ಮತ್ತು ಆಫ್ಘಾನಿಸ್ತಾನ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ವತಿಯಿಂದ ಉದ್ದೇಶಿತ ಪಾಕಿಸ್ತಾನ-ಚೀನಾ ವಿಶೇಷ ಆರ್ಥಿಕ ವಲಯ ಯೋಜನೆಯನ್ನು  ಹಾಳುಗೆಡವಲು ಜಂಟಿ ಕಾರ್ಯಾಚರಣೆ ಆರಂಭಿಸಲಾಗಿದ್ದು, ಆಫ್ಘಾನಿಸ್ತಾನದ ಮೂಲಕ ಭಾರತ ಈ ಪ್ರಮುಖ ಯೋಜನೆಯನ್ನು ಕಾರ್ಯಗತಗೊಳಿಸಲು ಹೊಂಚುಹಾಕಿದೆ. ಇದಕ್ಕಾಗಿ  ಪಾಕಿಸ್ತಾನದಲ್ಲಿರುವ ತನ್ನ ಮೂರು ರಾಯಭಾರ ಕಚೇರಿಗಳನ್ನು ಭಾರತ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಜಲಾಲಾಬಾದ್, ಕಂದಹಾರ್ ಮತ್ತು ಮಜರ್-ಇ-ಶರೀಫ್ ನಲ್ಲಿರುವ ಮೂರು ರಾಯಭಾರ  ಕಚೇರಿಗಳ ಮೂಲಕವಾಗಿ ಈ ವಿಧ್ವಂಸಕ ಯೋಜನೆಯನ್ನು ಭಾರತ ಕೈಗೆತ್ತಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

"ಈ ಮೂರು ರಾಯಭಾರ ಕಚೇರಿಗಳ ನೆರವಿನಿಂದ ಶಸ್ತ್ರಾಸ್ತ್ರಗಳು, ಅಪಾರ ಪ್ರಮಾಣದ ಹಣ ಮತ್ತು ತರಬೇತಿ ಸೇರಿದಂತೆ ಇತರೆ ವ್ಯವಸ್ಥಾಪನಾ ನೆರವನ್ನು ಭಾರತ ಕರಾಚಿ ಮತ್ತು  ಬಲೂಚಿಸ್ತಾನದ ಕೇಂದ್ರೀಯ ಆಡಳಿತವಿರುವ ಬುಡಕಟ್ಟು ಪ್ರದೇಶಗಳಲ್ಲಿನ ತನ್ನ ಏಜೆಂಟ್ ಗಳಿಗೆ ನೀಡುತ್ತಿದೆ. ಪಾಕಿಸ್ತಾನ ಸಂಸತ್ ನಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಖಟ್ಟಕ್, ಪಾಕಿಸ್ತಾನ  ವಿರೋಧಿ ಚಟುವಟಿಗೆ ಸಹಕಾರ ನೀಡಲು ಕಾಬುಲ್ ನಲ್ಲಿಯೂ ಕೂಡ "ರಾ" ತನ್ನ ಘಟಕವನ್ನು ಸ್ಥಾಪಿಸುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಬಲೂಚಿಸ್ತಾನದಲ್ಲಿ ಭಾರತದ ಗುಪ್ತಚರ ಸಂಸ್ಥೆ "ರಾ" ಗೆ ಸೇರಿದ ಓರ್ವ ಏಜೆಂಟ್ ನನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿತ್ತು. ಆದರೆ ಪಾಕಿಸ್ತಾನದ  ಆರೋಪವನ್ನು ಭಾರತ ನಿರಾಕರಿಸಿದ್ದು, ಬಂಧಿತ ವ್ಯಕ್ತಿ ಭಾರತದ "ರಾ" ಅಧಿಕಾರಿಯಲ್ಲ ಎಂದು ಸ್ಪಷ್ಟಪಡಿಸಿತ್ತು.

SCROLL FOR NEXT