ಹರಿದ್ವಾರ: ದೇಶದಾದ್ಯಂತ ರಾಮ ನವಮಿ ಹಬ್ಬದ ಆಚರಣೆಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದ್ದು, ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜೆಗಳನ್ನು ಶುಕ್ರವಾರ ನಡೆಸಲಾಗುತ್ತಿದೆ.
ಹರಿದ್ವಾರದಲ್ಲಿ ವಿಷೇಷವಾಗಿ ಪೂಜೆ ಪುನಸ್ಕಾರಗಳು ಇಂದು ಬೆಳಗ್ಗಿನಿಂದಲೇ ಆರಂಭವಾಗಿದ್ದು, ಭಕ್ತಾದಿಗಳು ಗಂಗಾನದಿಯಲ್ಲಿ ಮುಳುಗಿ ಸ್ವಚ್ಛತೆಯಿಂದ ದೇವರಿಗೆ ಆರತಿ ಮಾಡುವ ಮೂಲಕ ಪೂಜೆ ಸಲ್ಲಿಸುತ್ತಿದ್ದಾರೆ.
ರಾಮ ನವಮಿ ಶ್ರೀ ರಾಮನ ಜನ್ಮ ದಿನದ ಹಬ್ಬವೆಂದು ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ.
ರಾಮ ನವಮಿ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ರಾಮ ಭೂಮಿಯ ಮೇಲಿನ ದೈವಿಕ ಸ್ವರೂಪವಾಗಿದ್ದು, ಧರ್ಮದ ಮೂಲಕ ಜೀವನ ನಡೆಸುವುದನ್ನು ಹೇಳಿಕೊಟ್ಟಿದ್ದಾರೆ. ಈ ದಿನದ ಮೂಲಕ ಹೆಚ್ಚಿನ ನೈತಿಕತೆ ಹಾಗೂ ನೈತಿಕ ಮೌಲ್ಯಗಳ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಮುನ್ನಡೆಯೋಣ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಜನತೆಗೆ ಶುಭಾಶಯ ಕೋರಿದ್ದಾರೆ.
ದೈವಿಕ ಪ್ರತಿರೂಪವಾಗಿರುವ ರಾಮ ತಮ್ಮ ಉದ್ದಾತ್ತ ಆದರ್ಶ ಹಾಗೂ ನೈತಿಕ ಮೌಲ್ಯಗಳ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಈ ಮೂಲಕ ನಾವು ಕೂಡ ಸಮಾಜವನ್ನು ಶ್ರೀಮಂತವಾಗಿ, ಶಾಂತಿಯುತವಾಗಿ ಹಾಗೂ ಸಾಮರಸ್ಯದಿಂದ ನಿರ್ಮಾಣ ಮಾಡೋಣ ಎಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಹೇಳಿದ್ದಾರೆ.