ದೇಶ

ಭೀಕರ ಬರಗಾಲ ಹಿನ್ನಲೆ: ಕೇಂದ್ರದಿಂದ ಶೇ.10ರಷ್ಚು ಸಾಲ ಪ್ರಮಾಣ ಹೆಚ್ಚಳ

Srinivasamurthy VN

ನವದೆಹಲಿ: ತೀವ್ರ ಬರಗಾಲದಿಂದ ತಲ್ಲಣಿಸಿರುವ ದೇಶದ ರೈತರಿಗೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡುವ ಸಾಲದ ಪ್ರಮಾಣವನ್ನು  ಶೇ.10ರಷ್ಟು ಏರಿಕೆ ಮಾಡಿದೆ.

"ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್" ಪತ್ರಿಕೆ ವರದಿ ಮಾಡಿರುವಂತೆ ಸಣ್ಣ ಮತ್ತು ಮಧ್ಯಮ ಕ್ರಮಾಂಕದ ರೈತರಿಗೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಮತ್ತು  ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರದ  ವತಿಯಿಂದ ದೇಶಾದ್ಯಂತ ಇರುವ ಸುಮಾರು ಶೇ.42ರಷ್ಟು ಪ್ರಮಾಣದ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಸಾಲದ ನೆರವು ಪಡೆಯುತ್ತಿದ್ದು, ಸರ್ಕಾರದ  ಸಾಲ ಪ್ರಮಾಣವನ್ನು ಶೇ.10ರಷ್ಟು ಏರಿಕೆ ಮಾಡುವುದಾಗಿ ಸೋಮವಾರ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ತೀವ್ರ ಬರಗಾಲದಿಂದ ನೊಂದು ಮತ್ತು ಸಾಲದ ಹೊರೆ ತೀರಿಸಲಾಗದೇ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, 2015ರಲ್ಲಿ ಸುಮಾರು 1, 615 ಮಂದಿ ರೈತರು  ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ ಬಹುತೇಕ ಪ್ರಕರಣಗಳ ಬೆಳೆ ನಾಶ ಮತ್ತು ಸಾಲ ತೀರಿಸಲಾಗದೇ ಮಾಡಿಕೊಂಡ ಆತ್ಮಹತ್ಯೆ ಪ್ರಕರಣಗಳಾಗಿದ್ದು,  ಮಹಾರಾಷ್ಟ್ರದಲ್ಲಿ 1972ರಿಂದ ಕಂಡು ಕೇಳರಿಯದ ರೀತಿಯಲ್ಲಿ ಈ ಭಾರಿ ಭೀಕರ ಬರಗಾಲ ಆವರಿಸಿದೆ.

ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಸಾಲದ ಪ್ರಮಾಣವನ್ನು ಶೇ.10ರಷ್ಟು ಏರಿಕೆ ಮಾಡಿದ್ದು, ಪ್ರತೀ ವರ್ಷ ಈ ಸಾಲದ ಪ್ರಮಾಣವನ್ನು  ಶೇ.10ರಂತೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಇದಲ್ಲದೆ ಹಳ್ಳಿಗಾಡಿನಲ್ಲಿರುವ ಸುಮಾರು 63 ಸಾವಿರ ಪ್ರಾಥಮಿಕ ಕೃಷಿ ಸಹಕಾರಿ ಸಮಾಜಗಳು ಮತ್ತು ಸಹಕಾರ  ಬ್ಯಾಂಕುಗಳನ್ನು ಗಣಕೀಕೃತ ಮಾಡಲು ನಿರ್ಧರಿಸಿದೆ. ಇದಲ್ಲದೇ ಭೂಮಿ ಇಲ್ಲದ ಬಡ ರೈತರಿಗೆ ಭೂಮಿ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ  ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ.

ಅಂತೆಯೇ ಪ್ರಧಾನ ಮಂತ್ರಿ ಕೃಷಿಯೋಜನೆ ಒಳಗೊಂಡಂತೆ ರೈತರ ಉಪಯೋಗಕ್ಕೆ ಬರುವ ಇತರೆ 9 ಯೋಜನೆಗಳ ಪರಿಣಾಮಕಾರಿ ಜಾರಿಗೂ ಕೇಂದ್ರ ಸರ್ಕಾರ  ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.

SCROLL FOR NEXT