ಆಗ್ರಾ: ಯಮುನಾ ನದಿ ಮೂಲಕ ದೆಹಲಿಯಿಂದ ಆಗ್ರಾಗೆ ಪ್ರಯಾಣ ಕೈಗೊಳ್ಳುವ ವ್ಯಸ್ಥೆ ಕಲ್ಪಿಸುವುದಾಗಿ 2014 ರ ಡಿಸೆಂಬರ್ ನಲ್ಲಿ ಕೇಂದ್ರ ಕೇಂದ್ರ ಹೆದ್ದಾರಿ ಮತ್ತು ಜಲಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು. ಈ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ. ಈ ಬಗ್ಗೆ ನಿತಿನ್ ಗಡ್ಕರಿ ಅವರನ್ನು ಎಚ್ಚರಿಸಲು ಪರಿಸರವಾದಿಗಳು ಯಮುನಾ ನದಿಯಲ್ಲಿ ಪೇಪರ್ ದೋಣಿಗಳನ್ನು ತೇಲಿಬಿಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ನೂರಾರು ಪೇಪರ್ ದೋಣಿಗಳನ್ನು ತೇಲಿಬಿಟ್ಟ ಕಾರ್ಯಕರ್ತರು ಯಮುನಾ ನದಿಯನ್ನು ಶೀಘ್ರವೇ ಪುನಶ್ಚೇತನಗೊಳಿಸಬೇಕೆಂದು ಘೋಷಣೆ ಕೂಗಿದ್ದಾರೆ. ದೆಹಲಿಯಿಂದ ಆಗ್ರಾಗೆ ಯಮುನಾ ನದಿ ಮೂಲಕ ಪ್ರಯಾಣ ಕೈಗೊಳ್ಳುವ ವ್ಯವಸ್ಥೆ ಶೀಘ್ರವೇ ಜಾರಿಯಾಗಲಿದೆ, ಇದಕ್ಕಾಗಿ ನೆದರ್ ಲ್ಯಾಂಡ್ ಸರ್ಕಾರದ ನೆರವು ಪಡೆಯಲಾಗಿದ್ದು ನದಿಯ ಎರಡೂ ಭಾಗಗಳಲ್ಲಿ ಶೀಘ್ರವೇ ವಾಟರ್ ಟರ್ಮಿನಲ್ ನ್ನು ನಿರ್ಮಿಸಲಾಗುವ ಯೋಜನೆ ಪ್ರಾರಂಭವಾಗಲಿದೆ ಎಂದು 2014 ರ ಡಿಸೆಂಬರ್ 3 ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು. ಆದರೆ ಇದಕ್ಕೆ ಸಂಬಂಧಿಸಿದಂತೆ ಈ ವರೆಗೂ ಯಾವುದೇ ಕೆಲಸಗಳೂ ನಡೆದಿಲ್ಲ ಎಂದು ನದಿ ಸಂಪರ್ಕ ಅಭಿಯಾನದ ಕಾರ್ಯಕರ್ತ ದೇವಶಿಶ್ ಭಟ್ಟಾಚಾರ್ಯ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ತಾನು ನೀಡಿದ್ದ ಭರವಸೆಯನ್ನು ಸಂಪೂರ್ಣವಾಗಿ ಮರೆತಿದೆ. ಯಮುನಾ ನದಿಯನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳುವ ವಿಷಯದಲ್ಲೂ ಕೇಂದ್ರ ವಿಫಲವಾಗಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಇನ್ನು ನದಿ ಮೂಲಕ ಪ್ರಯಾಣ ಕೈಗೊಳ್ಳುವ ಯೋಜನೆಗೆ 10 ದಿನಗಳಲ್ಲಿ ಕ್ಯಾಬಿನೆಟ್ ನೋಟ್ ಹೊರಡಿಸುವುದಾಗಿ ನಿತಿನ್ ಗಡ್ಕರಿ ತಿಳಿಸಿದ್ದಾರೆ.