ವಿಶಾಖಪಟ್ಟಣಂ: 15 ಲಕ್ಷ ಹಣಕ್ಕಾಗಿ 6ನೇ ತರಗತಿಯಲ್ಲಿ ಓದುತ್ತಿದ್ದ ಗುಂಟೂರಿನ ಬಾಲಕನೊಬ್ಬನನ್ನು ಅಪಹರಿಸಿ ಕೊಂದ ಬೆನ್ನಲ್ಲೇ ಇದೀಗ ವಿಶಾಖಪಟ್ಟಣನಲ್ಲಿ ಒಂದನೇ ತರಗತಿ ವಿದ್ಯಾರ್ಥಿಯನ್ನು ಅಪಹರಿಸಿರುವ ಘಟನೆ ವರದಿಯಾಗಿದೆ.
ಪೆಂದೂರ್ತಿ ಮಂಡಲದ ಮಹಾತಿ ಪಬ್ಲಿಕ್ ಸ್ಕೂಲ್ ನಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದ ಸಾಯಿ ಕೃಷ್ಣ ಎಂದಿನಂತೆ ಏಪ್ರಿಲ್ 13ರಂದು ಶಾಲೆಗೆ ತೆರಳಿದ್ದನು. ಆದರೆ ಸಂಜೆಯಾದರೂ ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ತಾಯಿ ಸೌಜನ್ಯ ಶ್ರೀದೇವಿ ಮಗನಿಗಾಗಿ ಹುಡುಕಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೆಂದೂರ್ತಿ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಜೆ ಮುರಳಿ ಅವರು ಸಾಯಿ ಕೃಷ್ಣ ಓದುತ್ತಿದ್ದ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸೌಜನ್ಯ ಶ್ರೀದೇವಿಯಿಂದ ವಿಚ್ಛೇದನ ಪಡೆದು ದೂರವಾಗಿದ್ದ ದಿವಾಕರ್ ಕಾರಿನಲ್ಲಿ ಬಂದು ತಮ್ಮ ಮಗನನ್ನು ಕರೆದುಕೊಂಡು ಹೋಗಿರುವ ದೃಶ್ಯಗಳು ಸೆರೆಯಾಗಿವೆ. ಸದ್ಯ ಕಾರಿನ ರಿಜಿಸ್ಟ್ರೇಷನ್ ನಂಬರ್ ಪತ್ತೆ ಹಚ್ಚಿರುವ ಪೊಲೀಸರು ಹೈದರಾಬಾದ್ ಹಾಗೂ ಇನ್ನು ಹಲವು ಕಡೆಗಳಿಗೆ ತಂಡಗಳನ್ನು ಕಳಿಸಿದ್ದಾರೆ.
ಸತಿಪತಿಗಳಾಗಿದ್ದ ಸೌಜನ್ಯ ಶ್ರೀದೇವಿ ಹಾಗೂ ದಿವಾಕರ್ ಕಳೆದ ಎರಡೂವರೆ ವರ್ಷಗಳ ಹಿಂದೆ ವಿಚ್ಛೇದನ ಪಡೆದು ದೂರವಾಗಿದ್ದರು. ಇಬ್ಬರಿಗೆ ಮುದ್ದಾದ ಗಂಡು ಮಗುವೊಂದಿತ್ತು. ಕೋರ್ಟ್ ಆದೇಶದಂತೆ ಮಗುವನ್ನು ತಾಯಿಯ ಸುಪರ್ದಿಗೆ ನೀಡಲಾಗಿತ್ತು. ವಿಚ್ಛೇಧನ ಬಳಿಕ ಹೈದರಾಬಾದ್ ನಲ್ಲಿ ವಾಸವಾಗಿದ್ದ ಸೌಜನ್ಯ ವಿಶಾಖಪಟ್ಟಣನ ಪೆಂದೂರ್ತಿಗೆ ಬಂದು ನೆಲೆಸಿದ್ದರು.