ದೇಶ

ಭಾರತೀಯ ಕೈದಿಗಳ ವಿರುದ್ಧ ಪಾಕ್ ಜೈಲಿನಲ್ಲಿ ಪಿತೂರಿ: ದಲ್ ಬೀರ್ ಕೌರ್ ಶಂಕೆ

Srinivasamurthy VN

ಗುರುದಾಸ್ ಪುರ: ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ಕೈದಿಗಳ ವಿರುದ್ಧ ಪಿತೂರಿ ನಡೆಸಲಾಗುತ್ತಿದ್ದು, ವಿಷವುಣಿಸಿ ಕೊಲ್ಲಲಾಗುತ್ತಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ ಎಂದು ಸರಬ್ಜಿತ್  ಸಿಂಗ್ ಸಹೋದರಿ ದಲ್ ಬೀರ್ ಕೌರ್ ಶಂಕೆ ವ್ಯಕ್ತಪಡಿಸಿದ್ದಾರೆ.

ಲಾಹೋರ್ ನ ಕೋಟ್ ಲಕ್ ಪತ್ ಜೈಲಿನಿಂದ ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ಕಿರ್ಪಾಲ್ ಸಿಂಗ್ ಮೃತದೇಹದಲ್ಲಿ ಅಂಗಾಂಗಳ ನಾಪತ್ತೆಯಾದ ವಿಚಾರವನ್ನು ಮರಣೋತ್ತರ ಪರೀಕ್ಷೆ  ಹೋರಹಾಕುತ್ತಿದ್ದಂತೆಯೇ ಪಾಕಿಸ್ತಾನದ ಜೈಲಿನಲ್ಲಿ ಭಾರತೀಯ ಕೈದಿಗನ್ನು ಬೇಕೆಂದೇ ಕೊಲ್ಲಲಾಗುತ್ತಿದೆ ಎಂಬ ಅನುಮಾನ ಮೂಡತೊಡಗಿದೆ. ಇಡೀ ದೇಶದ ಗಮನ ಸೆಳೆದಿದ್ದ ಸರಬ್ಜಿತ್  ಸಿಂಗ್ ಪ್ರಕರಣದ ಬಳಿಕ ಇದೀಗ ಕಿರ್ಪಾಲ್ ಸಿಂಗ್ ಮೃತದೇಹದಲ್ಲಿಯೂ ಕೂಡ ಅಂಗಾಂಗಳು ನಾಪತ್ತೆಯಾಗಿರುವುದು ಈ ವಿಚಾರಕ್ಕೆ ಪುಷ್ಟಿ ನೀಡಿವೆ.

ಈ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಸರಬ್ಜಿತ್ ಸಿಂಗ್ ಸಹೋದರಿ ದಲ್ ಬೀರ್ ಕೌರ್, ಪಾಕಿಸ್ತಾನದಲ್ಲಿ ಭಾರತೀಯ ಕೈದಿಗಳ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದು ಅನುಮಾನ  ವ್ಯಕ್ತಪಡಿಸಿದ್ದಾರೆ. ಗುರುದಾಸ್ ಪುರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಲಬೀರ್ ಕೌರ್ ಅವರು, "3 ವರ್ಷಗಳ ಹಿಂದೆ ಮೃತಪಟ್ಟ ನನ್ನ ಸಹೋದರನ ಶವದಲ್ಲಿ ಕೂಡ ಹಲವು  ಅಂಗಾಂಗಗಳು ನಾಪತ್ತೆಯಾಗಿದ್ದವು. ಇದೀಗ ಮತ್ತದೇ ಪಾಕ್ ಜೈಲಿನಿಂದ ಬಂದ ಕಿರ್ಪಾಲ್ ಸಿಂಗ್ ರ ಮೃತ ದೇಹದಲ್ಲಿಯೂ ಹೃದಯ ಮತ್ತು ಹೊಟ್ಟೆಯಲ್ಲಿನ ಕೆಲ ಅಂಗಾಂಗಗಳು  ನಾಪತ್ತೆಯಾಗಿವೆ. ಈ ಎರಡೂ ಪ್ರಕರಣಗಳನ್ನು ಗಮನಿಸಿದರೆ ಪಾಕಿಸ್ತಾನದಲ್ಲಿರುವ ಭಾರತೀಯ ಕೈದಿಗಳ ವಿರುದ್ಧ ಏನೋ ಪಿತೂರಿ ನಡೆಯುತ್ತಿದೆ ಎಂಬ ಅನುಮಾನ ಹುಟ್ಟುತ್ತಿದ್ದು, ಈ ಬಗ್ಗೆ  ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕ್ರಮ ಕೈಗೊಳ್ಳಬೇಕು ಎಂದು ದಲಬೀರ್ ಕೌರ್ ಆಗ್ರಹಿಸಿದ್ದಾರೆ.

ಈ ಹಿಂದೆಯೇ ನಾನು ಕಿರ್ಪಾಲ್ ಸಿಂಗ್ ಮೃತದೇಹ ಅಂಗಾಂಗಗಳು ನಾಪತ್ತೆಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದೆ. ಇದೀಗ ಅದು ನಿಜವಾಗಿದ್ದು, ಸರಬ್ಜಿತ್ ಸಿಂಗ್ ರಂತೆಯೇ ಕಿರ್ಪಾಲ್  ಸಿಂಗ್ ಅವರ ಹೃದಯವನ್ನು ಕೂಡ ಪಾಕಿಗಳು ಕಳ್ಳತನ ಮಾಡಿದ್ದಾರೆ. ಒಂದು ವೇಳೆ ಕಿರ್ಪಾಲ್ ಸಿಂಗ್ ರನ್ನು ವಿಷವುಣಿಸಿ ಕೊಂದು ಹಾಕಿದ್ದರೆ, ಪರೀಕ್ಷೆ ವೇಳೆ ತಿಳಿಯದಿರಲಿ ಎಂದು ಅಥವಾ  ಅಂಗಾಂಗಗಳ ಕಳ್ಳಸಾಗಣೆಗಾಗಿ ಕಿರ್ಪಾಲ್ ಸಿಂಗ್ ರನ್ನು ಕೊಂದು ಹಾಕಿ ಹೃದಯವನ್ನು ಕದ್ದಿರಬಹುದು ಎಂದು ದಲ್ ಬೀರ್ ಕೌರ್ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶೇಷ ಸಮಿತಿ ನೇಮಕ ಮಾಡಿ ತನಿಖೆ ನಡೆಸಬೇಕು. ಕಿರ್ಪಾಲ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು  ಬಿಂಬಿಸಬೇಕಿದ್ದರೆ ಅವರ ಹೃದಯವನ್ನೇಕೆ ತೆಗೆದು ಹಾಕಬೇಕಿತ್ತು ಎಂದು ಕೌರ್ ಪ್ರಶ್ನಿಸಿದ್ದಾರೆ. ಅಲ್ಲದೆ ಪೇಶಾವರ ಮತ್ತು ಲಾಹೋರ್ ಜೈಲುಗಳಲ್ಲಿರುವ ಭಾರತೀಯ ಕೈದಿಗಳ ಸ್ಥಿತಿಗತಿ ಕುರಿತು  ಗಂಭೀರವಾಗಿ ತನಿಖೆ ನಡೆಸಬೇಕು ಎಂದು ಕೌರ್ ಆಗ್ರಹಿಸಿದ್ದಾರೆ.

ಪಾಕಿಸ್ತಾನದಲ್ಲಿ ಫೈಸಲಾಬಾದ್ ರೈಲ್ವೇ ನಿಲ್ದಾಣದ ಮೇಲೆ ನಡೆದ ಬಾಂಬ್ ದಾಳಿ ಸಂಬಂಧ ಭಯೋತ್ಪಾದನೆ ಮತ್ತು ಗೂಢಚಾರಿಕೆ ನಡೆಸಿದ ಆರೋಪದ ಮೇಲೆ 1991ರಲ್ಲಿ ಕಿರ್ಪಾಲ್ ಸಿಂಗ್  ರನ್ನು ಬಂಧಿಸಿ ಆಜೀವ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇತ್ತೀಚೆಗೆ ಕಿರ್ಪಾಲ್ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಜೈಲು ಅಧಿಕಾರಿಗಳು ತಿಳಿಸಿದ್ದರು. ಇದೀಗ  ಕಿರ್ಪಾಲ್ ಸಿಂಗ್ ಮೃತ ದೇಹ ಅಂತಿಮ ವಿಧಿವಿಧಾನಕ್ಕಾಗಿ ಭಾರತಕ್ಕೆ ಬಂದಿದ್ದು, ಸರಬ್ಜಿತ್ ಸಿಂಗ್ ರಂತೆಯೇ ಕಿರ್ಪಾಲ್ ದೇಹದಲ್ಲಿಯೂ ಹೃದಯಾ ಮತ್ತು ಹೊಟೆಯ ಭಾಗಗಳು  ನಾಪತ್ತೆಯಾಗಿರುವ ವಿಚಾರ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

SCROLL FOR NEXT