ನವದೆಹಲಿ: ಭಯೋತ್ಪಾದನೆ ಬಗ್ಗೆ ಚೀನಾ ಅನುಸರಿಸುತ್ತಿರುವ ದ್ವಿಮುಖ ನೀತಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಉಗ್ರವಾದದ ಕುರಿತು ದ್ವಿಮುಖ ನೀತಿ ಹೊಂದುವುದು ಸರಿಯಲ್ಲ ಎಂದು ಚೀನಾಕ್ಕೆ ಸ್ಪಷ್ಟಪಡಿಸಿದ್ದೇವೆ ಎಂದಿದ್ದಾರೆ.
ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಭಾರತದ ಯತ್ನಕ್ಕೆ ಚೀನಾ ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಮನೋಹರ್ ಪರಿಕ್ಕರ್ ಈ ಹೇಳಿಕೆ ನೀಡಿದ್ದಾರೆ. ಎಲ್ಲಾ ರೀತಿಯ ಭಯೋತ್ಪಾದನೆ ಒಂದೇ ಆಗಿದ್ದು, ಒಂದೇ ರೀತಿಯಲ್ಲಿ ಅವುಗಳ ವಿರುದ್ಧ ಹೋರಾಡಬೇಕಿದೆ ಎಂದು ಮನೋಹರ್ ಪರಿಕ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಮಾಸ್ಕೋಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಸಹ ಭಾರತದ ಯತ್ನಕ್ಕೆ ಅಡ್ಡಿಪಡಿಸಿದ್ದ ಚೀನಾ ಕ್ರಮವನ್ನು ಪ್ರಸ್ತಾಪಿಸಿ ವಿರೋಧ ವ್ಯಕ್ತಪಡಿಸಿದ್ದರು. ಈಗ ಮನೋಹರ್ ಪರಿಕ್ಕರ್ ಸಹ ಇತ್ತೀಚೆಗೆ ತಮ್ಮ ಚೀನಾ ಭೇಟಿ ಕುರಿತು ಮಾತನಾಡಿದ್ದು, ಉಭಯ ದೇಶಗಳ ನಡುವಿನ ಮಾತುಕತೆ ನೇರ ಮತ್ತು ಧನಾತ್ಮಕವಾಗಿತ್ತು, ಗಡಿ ವಿಷಯಗಳ ಬಗ್ಗೆ ಪರಸ್ಪರ ಮಾತುಕತೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.