ನವದೆಹಲಿ: ಬಜೆಟ್ ಅಧಿವೇಶನದ ಎರಡನೇ ಭಾಗ ಸೋಮವಾರದಿಂದ ಆರಂಭಗೊಂಡಿದೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ಸಂಸತ್ ಭವನದ ಹೊರಗೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಅಧಿವೇಶನದಲ್ಲಿ ಪರಿಣಾಮಕಾರಿ ವಿಷಯಗಳು ಚರ್ಚೆಗೆ ಬಂದು ಕಲಾಪದ ಸದುಪಯೋಗವಾಗುವ ಆಶಾವಾದವಿದೆ ಎಂದು ಹೇಳಿದರು.
ನಂತರ ಬೆಳಗ್ಗೆ 10.45ಕ್ಕೆ ಕಲಾಪ ಆರಂಭಗೊಂಡಾಗ ಕಾಂಗ್ರೆಸ್ ಸದಸ್ಯರು ಉತ್ತರಾಖಂಡ ವಿವಾದವನ್ನು ಪ್ರಸ್ತಾಪಿಸಿದರು. ಅದಕ್ಕೆ ಉತ್ತರಿಸಿದ ಸರ್ಕಾರ, ವಿವಾದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವುದರಿಂದ ಸದನದಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದರು.
ರಾಜ್ಯಸಭೆಯಲ್ಲಿ ದೇಶದ ಬರಗಾಲ ಮತ್ತು ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಪಕ್ಷ ನೊಟೀಸ್ ಜಾರಿ ಮಾಡಿತು.
ದೇಶದಲ್ಲಿನ ಬರಗಾಲ ಪರಿಸ್ಥಿತಿ ಕುರಿತು ನಾಡಿದ್ದು ಬುಧವಾರ ಚರ್ಚೆ ನಡೆಸಲು ಸಿದ್ಧವಿರುವುದಾಗಿ ಸರ್ಕಾರ ಪ್ರಕಟಿಸಿದೆ.
ರಾಜ್ಯಸಭಾಧ್ಯಕ್ಷರು ಬ್ರುಸೆಲ್ ಮೇಲೆ ಉಗ್ರಗಾಮಿಗಳ ದಾಳಿ, ಜಪಾನ್ ನ ಈಕ್ವೆಡಾರ್ ನಲ್ಲಿ ಭೂಕಂಪ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಲಾಯಿತು. ನಂತರ ಸದಸ್ಯರು ಅಗಲಿದವರಿಗೆ ನಿಮಿಷಗಳ ಕಾಲ ಶ್ರದ್ಧಾಂಜಲಿ ಸಲ್ಲಿಸಿದರು.
ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಉಚಿತ ಅನಿಲ ಸಂಪರ್ಕ ನೀಡಲಿದ್ದು, ಪ್ರಧಾನಿ ಯೋಜನೆಯನ್ನು ಮೇ 1ರಂದು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ಎರಡೂ ಸದನಗಳಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಉತ್ತರಾಖಂಡ ಮತ್ತು ಬರಗಾಲ ಪರಿಸ್ಥಿತಿ ಕುರಿತು ವಾದ ವಿವಾದಗಳು ನಡೆದವು. ರಾಜ್ಯ ಸಭೆ ಕಲಾಪವನ್ನು ಅಪರಾಹ್ನ 2 ಗಂಟೆಗೆ ಮುಂದೂಡಲಾಯಿತು.
ಚೀನಾ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಳಪೆ ಗುಣಮಟ್ಟದ ವಸ್ತುಗಳಿಗ ಆಮದು ನಿಷೇಧಿಸಲಾಗಿದೆ. ಹಾಗಂತ ಚೀನಾ ದೇಶವೊಂದಕ್ಕೇ ನಿಷೇಧ ಹೇರಲು ಸಾಧ್ಯವಿಲ್ಲ. ವಸ್ತುಗಳ ಬಳಕೆ ಸುರಕ್ಷತೆ ಉಲ್ಲಂಘಿಸುವ ದೇಶಗಳ ಪದಾರ್ಥಗಳನ್ನು ನಿಷೇಧಿಸಲಾಗುವುದು ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದರು.