ನವದೆಹಲಿ: ಚೀನಾ ಪ್ರಬಲ ಪ್ರತಿರೋಧವೊಡ್ಡಿದ ಪರಿಣಾಮ ಜರ್ಮಿನಿಯಲ್ಲಿ ನೆಲೆಸಿರುವ ಉಯ್ಘರ್ ಸಮುದಾಯದ ಹೋರಾಟಗಾರ ದೋಲ್ಕುನ್ ಇಸಾಗೆ ನೀಡಲಾಗಿದ್ದ ವೀಸಾವನ್ನು ಭಾರತ ಸರ್ಕಾರ ಹಿಂಪಡೆದಿದೆ.
ಧರ್ಮಶಾಲಾದಲ್ಲಿ ಈ ತಿಂಗಳ ಅಂತ್ಯಕ್ಕೆ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸಲು ದೋಲ್ಕುನ್ ಭಾರತಕ್ಕೆ ಆಗಮಿಸಬೇಕಿತ್ತು. ಇದಕ್ಕಾಗಿ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ದೋಲ್ಕುನ್ ಗೆ ವೀಸಾ ಸಹ ನೀಡಿತ್ತು.
ಆದರೆ ದೋಲ್ಕುನ್ ಇಸಾ ನನ್ನು ಉಗ್ರನೆಂದು ಘೋಷಿಸಿರುವ ಚೀನಾ ಭಾರತ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇಸಾ ಚೀನಾಗೆ ಬೇಕಾಗಿರುವ ಪ್ರಮುಖ ಉಗ್ರನಾಗಿದ್ದಾನೆ. ಭಾರತ ಸರ್ಕಾರ ವೀಸಾ ನೀಡಿರುವುದರ ಬಗ್ಗೆ ಪ್ರಶ್ನಿಸಲಾಗಿದ್ದು, ಇಸಾಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂಬ ಉತ್ತರ ಭಾರತದಿಂದ ಬಂದಿದೆ ಎಂದು ಈ ಹಿಂದೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದರು. ಈಗ ಚೀನಾದ ಪ್ರಬಲ ಪ್ರತಿರೋಧದ ನಂತರ ಇಸಾಗೆ ನೀಡಲಾಗಿದ್ದ ವೀಸಾವನ್ನು ವಾಪಸ್ ಪಡೆದಿರುವುದನ್ನು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.