ದೇಶ

ಮೋದಿಯವರ ವಿದ್ಯಾರ್ಹತೆಯನ್ನೂ ಬಹಿರಂಗಪಡಿಸಿ: ಕೇಜ್ರಿವಾಲ್

Manjula VN

ನವದೆಹಲಿ: ನನ್ನ ವಿದ್ಯಾರ್ಹತೆಯನ್ನು ಬಹಿರಂಗ ಪಡಿಸಿದಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿದ್ಯಾರ್ಹತೆಯನ್ನೂ ಬಹಿರಂಗಪಡಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಆಗ್ರಹಿಸಿದ್ದಾರೆ.

ಈ ಕುರಿತಂತೆ ಕೇಂದ್ರ ಮಾಹಿತಿ ಆಯೋಗಕ್ಕೆ ಪತ್ರ ಬರೆದಿರುವ ಅವರು, ನನ್ನ ವಿದ್ಯಾರ್ಹತೆ ಹಾಗೂ ಆಸ್ತಿ ವಿವರವನ್ನು ಕೇಳಿದ ಸಂದರ್ಭದಲ್ಲಿ ನಾನು ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸಿರಲಿಲ್ಲ. ಆದರೆ, ಕೇಂದ್ರೀಯ ಮಾಹಿತಿ ಆಯೋಗ ಮೋದಿಯವರ ಶೈಕ್ಷಣಿಕ ಅರ್ಹತೆಯನ್ನೇಕೆ ಮರೆಯಾಚಲು ಯತ್ನಿಸುತ್ತಿದೆ ಎಂಬುದು ನನಗೆ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿಯವರು ಪದವಿಯನ್ನೇ ಪಡೆದಿಲ್ಲ ಎಂದು ನನಗೆ ಮಾಹಿತಿ ಮಂದಿದೆ. ದೇಶದ ಜನತೆ ಸತ್ಯವನ್ನು ತಿಳಿದುಕೊಳ್ಳಲು ಬಯಸಿದ್ದಾರೆ. ಮೋದಿಯವರ ಪದವಿ ಮಾಹಿತಿಯನ್ನು ಬಹಿರಂಗಪಡಿಸಲು ಯಾವ ಕಾರಣಕ್ಕೆ ಹಿಂದೇಟು ಹಾಕುತ್ತಿದ್ದೀರಿ. ಇದು ಸರಿಯಾದ ನಡೆಯಲ್ಲ. ಧೈರ್ಯವನ್ನು ತೋರಿಸಿ ದಾಖಲೆಗಳನ್ನು ಬಹಿರಂಗ ಪಡಿಸಿ ಎಂದು ಸಿಐಸಿಗೆ ಕೇಜ್ರಿವಾಲ್ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ತಾವು ಬಿಎ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದಿಂದ ಹಾಗೂ ಸ್ನಾತಕೋತ್ತರ ಪದವಿಯನ್ನು ಗುಜರಾತ್ ವಿಶ್ವವಿದ್ಯಾಲಯದಿಂದ ಪಡೆದಿರುವುದಾಗಿ ಘೋಷಣೆ ಮಾಡಿದ್ದರು. ಇದರಂತೆ ಮೋದಿಯವರ ವಿದ್ಯಾರ್ಹತೆ ಕುರಿತು ಮಾಹಿತಿ ನೀಡುವಂತೆ ಆರ್ ಟಿಐನಲ್ಲಿ ಅರ್ಜಿಯೊಂದು ದಾಖಲಾಗಿತ್ತು.

ಆದರೆ, ಈ ಅರ್ಜಿ ಕುರಿತಂತೆ ಮಾಹಿತಿ ನೀಡಲು ತಿರಸ್ಕರಿಸಿದ್ದ ದೆಹಲಿ ವಿಶ್ವವಿದ್ಯಾಲಯವು ಮೋದಿಯವರ ಅಂಕ ವಿವರಗಳು ಖಾಸಗಿ ಮಾಹಿತಿಯಾಗಿದ್ದು, ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದಾದ ಕೆಲವು ದಿನಗಳ ನಂತರ ಕ್ರಮಸಂಖ್ಯೆ ಇಲ್ಲದ ಕಾರಣ ಈ ಈ ಸಂಬಂಧ ಮಾಹಿತಿ ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿತ್ತು.

SCROLL FOR NEXT