ನವದೆಹಲಿ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನ ಪಾಕಿಸ್ತಾನದ ಇಸ್ಲಾಮಾಬಾದ್ಗೆ ತೆರಳಲು ತಯಾರಿ ನಡೆಸಿರುವ ಹಿಜ್ಬುಲ್ ಉಗ್ರ ಸಂಘಟನೆ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಪಾಕ್ಗೆ ಬರಕೂಡದು ಎಂದು ಸಿಂಗ್ಗೆ ಬೆದರಿಕೆ ಒಡ್ಡಿದ್ದಾನೆ.
ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಬರುತ್ತಿದ್ದಾರೆ. ದೇಶಾದ್ಯಂತ ಪ್ರತಿಭಟನೆ ನಡೆಸಲು ಕೆಲವರು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ರಾಜನಾಥ್ ಸಿಂಗ್ ಅವರ ಭದ್ರತೆಯ ಜವಾಬ್ದಾರಿ ನಿಮ್ಮದೇ ಎಂದು ಪಾಕಿಸ್ತಾನಕ್ಕೆ ಭಾರತ ಹೇಳಿದೆ.
ಕಾಶ್ಮೀರದಲ್ಲಿ ಹಿಜ್ಬುಲ್ ಕಮಾಂಡರ್ ಬುರ್ಹಾನ್ ವನಿ ಹತ್ಯೆ ಹಾಗೂ ಅಮಾಯಕರ ಸಾವನ್ನು ಲಾಹೋರ್ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಖಂಡಿಸಿದ ಹಿಜ್ಬುಲ್ ಮುಖ್ಯಸ್ಥ ಸಲಾಹುದ್ದೀನ್, ರಾಜನಾಥ್ ಸಿಂಗ್ ಪಾಕ್ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾನೆ.
ಭಾರತ-ಪಾಕ್ ದೇಶಗಳ ಮಧ್ಯೆ ಕಾಶ್ಮೀರ ವಿಷಯದಲ್ಲಿ ಉಂಟಾಗಿರುವ ಸಮಸ್ಯೆಗೆ ಪಾಕ್ ಮೂಗುತೂರಿಸುತ್ತಿದ್ದು, ಕಾಶ್ಮೀರ ಮುಂದೊಂದು ದಿನ ಪಾಕಿಸ್ತಾನದ ಭಾಗವಾಗಲಿದೆ ಎಂಬ ಹೇಳಿಕೆ ನೀಡಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಕಿಡಿಕಾರಿರುವ ಭಾರತ ಸಾರ್ಕ್ ಶೃಂಗಸಭೆ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಸಿಂಗ್ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.