ಪ್ರತಿವರ್ಷ 350 ಟನ್ ಅರೆಬೆಂದ ಶವಗಳು ಗಂಗಾ ನದಿ ಪಾಲು
ಒಂದರ ನಂತರ ಮತ್ತೊಂದು ಬರುವ ಮನುಷ್ಯನ ಮೃತದೇಹ... ಅದರ ಮಧ್ಯೆ ಪುರೋಹಿತರ ದಿನನಿತ್ಯದ ವ್ಯವಹಾರಗಳು...
ವಾರಣಾಸಿ: ಒಂದರ ನಂತರ ಮತ್ತೊಂದು ಬರುವ ಮನುಷ್ಯನ ಮೃತದೇಹ...ಅದರ ಮಧ್ಯೆ ಪುರೋಹಿತರ ದಿನನಿತ್ಯದ ವ್ಯವಹಾರಗಳು ಸಾಗುತ್ತಿರುತ್ತವೆ...ಗಂಟೆ ಲಯಬದ್ಧವಾಗಿ ಬಡಿಯುತ್ತಿದ್ದಂತೆ ಅರ್ಚಕರು ಮಂತ್ರ ಪಠಿಸುತ್ತಿರುತ್ತಾರೆ. ಅಷ್ಟೂ ಚಿತೆಗಳಿಂದಲೂ ಹೊಗೆ ಉರಿಯುತ್ತಿರುತ್ತದೆ. ರಾಶಿ ರಾಶಿ ಮರದ ತುಂಡುಗಳು, ಅಲ್ಲಲ್ಲಿ ಚದುರಿದ ಹೂ ರಾಶಿ..
ಇದು ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಗಂಗಾ ನದಿ ತೀರದಲ್ಲಿ ಕಂಡುಬರುವ ದೃಶ್ಯಗಳು. ಗಂಗಾ ನದಿ ತೀರದಲ್ಲಿ ಮೃತದೇಹವನ್ನು ಸುಟ್ಟು ಭಸ್ಮವನ್ನು ನೀರಿನಲ್ಲಿ ಮುಳುಗಿಸಿದರೆ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ. ಮೋಕ್ಷ ಪಡೆದು ಮರು ಹುಟ್ಟಿನಿಂದ ಬಚಾವಾಗಬಹುದು ಎಂಬ ನಂಬಿಕೆ ನಮ್ಮ ದೇಶದ ಹಿಂದೂ ಜನರಲ್ಲಿದೆ. ಹಾಗಾಗಿ ಗಂಗಾ ನದಿ ತೀರದ ಘಾಟ್ ಗಳು ಅಂತ್ಯಸಂಸ್ಕಾರ ತಾಣವಾಗಿ ಮಾರ್ಪಟ್ಟಿವೆ. ಆದರೆ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳವಾಗಿ ಉಳಿದಿಲ್ಲ.
ಈ ಪುರಾತನ ಹಿಂದೂ ನಂಬಿಕೆಯನ್ನು ನಿಷೇಧಿಸದಿದ್ದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತಮ್ಮ 20 ಸಾವಿರ ಕೋಟಿ ರೂಪಾಯಿ ಮೊತ್ತದ ''ನಮಾಮಿ ಗಂಗೆ'' ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುವುದು ಬಹುದೊಡ್ಡ ಸವಾಲಾಗಲಿದೆ ಎನ್ನುತ್ತಾರೆ ಇಲ್ಲಿನ ತಜ್ಞರು.
ಗಂಗಾ ನದಿ ನೀರು ಕಲುಷಿತಗೊಳ್ಳಲು ಮುಖ್ಯ ಕಾರಣ ಅದರ ತೀರದಲ್ಲಿ ಮನುಷ್ಯನ ಮೃತದೇಹದ ಅಂತ್ಯಸಂಸ್ಕಾರ ಮಾಡುವುದು. ಈ ಸಂಪ್ರದಾಯ ನಿಲ್ಲದಿದ್ದರೆ ಇಡೀ ಗಂಗಾ ಸ್ವಚ್ಛತೆ ಜಾಗೃತಿ ವ್ಯರ್ಥವಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಪ್ರತಿ ವರ್ಷ ಗಂಗಾ ನದಿ ತೀರದಲ್ಲಿ ಸುಮಾರು 350 ಟನ್ ಅರ್ಧ ಸುಟ್ಟ ಮನುಷ್ಯನ ಶವಗಳನ್ನು ಮತ್ತು ಮೂಳೆಗಳನ್ನು ಎಸೆಯಲಾಗುತ್ತದೆ. ಇನ್ನು 10 ಸಾವಿರ ಟನ್ ಬೂದಿ ಮತ್ತು ಇತರ ಅಂತ್ಯಸಂಸ್ಕಾರಕ್ಕೆ ಬಳಸಿದ ವಸ್ತುಗಳನ್ನು ಗಂಗಾ ನದಿಗೆ ಎಸೆಯಲಾಗುತ್ತದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಮೃತದೇಹ ಸಂಪೂರ್ಣವಾಗಿ ಸುಟ್ಟುಹೋಗಿರುವುದಿಲ್ಲ. ಅದನ್ನು ನೇರವಾಗಿ ನದಿಗೆ ಎಸೆಯಲಾಗುತ್ತದೆ. ಇದೊಂದು ಗಂಭೀರ ವಿಷಯವಾಗಿದ್ದು, ಈ ಬಗ್ಗೆ ವಸ್ತುಸ್ಥಿತಿಯನ್ನು ವಿವರಿಸಿ ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ. ಈ ಸಂಪ್ರದಾಯ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರದ ತಜ್ಞ ಸದಸ್ಯ ಬಿಡಿ ತ್ರಿಪಾಠಿ ಹೇಳುತ್ತಾರೆ.
ಇನ್ನು, ಹಿಂದೂ ಜನರ ಈ ನಂಬಿಕೆ ನದಿ ತೀರದಲ್ಲಿ ವ್ಯಾಪಾರವನ್ನೇ ಹುಟ್ಟುಹಾಕಿದೆ. ವ್ಯಾಪಾರಸ್ಥರಿಗೆ ಒಳ್ಳೆಯ ಗಳಿಕೆಯನ್ನೇ ತಂದುಕೊಡುತ್ತಿದೆ. ಅಂತ್ಯಸಂಸ್ಕಾರಕ್ಕೆ ಏನೆಲ್ಲಾ ಬೇಕೋ ಅದನ್ನು ನಮ್ಮ ಬಳಿ ಕೊಂಡುಕೊಳ್ಳುತ್ತಾರೆ. ಕಳೆದ ಕೆಲವು ದಶಕಗಳಿಂದ ನಾವು ಈ ವ್ಯಾಪಾರದಲ್ಲಿ ತೊಡಗಿದ್ದೇವೆ. ಹೆಚ್ಚಿನ ಸಾವು ಉಂಟಾದರೆ ನಮಗೆ ಹೆಚ್ಚು ವ್ಯಾಪಾರವಾಗುತ್ತದೆ ಎನ್ನುತ್ತಾರೆ ಅಲ್ಲಿನ ವ್ಯಾಪಾರಿ ರೋಹಿತ್ ತಿವಾರಿ. ಅವರು ತಮ್ಮ ಅಂಗಡಿಗೆ ಫ್ಯೂನರಲ್ ಪಾರ್ಲರ್ ಎಂದು ಹೆಸರಿಟ್ಟಿದ್ದಾರೆ. ಗಂಗಾ ನದಿ ತೀರದಲ್ಲಿರುವ ಮಣಿಕಾರ್ಣಿಕ್ ಘಾಟ್ ಮತ್ತು ಹರಿಶ್ಚಂದ್ರ ಘಾಟ್ ಗಳಲ್ಲಿ ಪ್ರತಿದಿನ ಸುಮಾರು 300 ಶವಗಳ ಅಂತ್ಯಸಂಸ್ಕಾರ ನಡೆಯುತ್ತದಂತೆ.ನನಗೆ ದಿನಕ್ಕೆ ಸರಾಸರಿ 15 ಸಾವಿರದಿಂದ 20 ಸಾವಿರ ವ್ಯಾಪಾರವಾಗುತ್ತದೆ ಎನ್ನುತ್ತಾರೆ ರೋಹಿತ್ ತಿವಾರಿ.
ಗಂಗಾ ನದಿಯ ಮಲಿನತೆ: ಯಾವೊಬ್ಬ ಸಾಮಾನ್ಯ ವ್ಯಕ್ತಿಗೂ ಗಂಗಾ ನದಿಯಲ್ಲಿ ಒಮ್ಮೆ ಮುಳಿಗೆದ್ದರೆ ಅದರ ಮಲಿನತೆಯ ಪ್ರಮಾಣ ಅರಿವಿಗೆ ಬರುತ್ತದೆ. ಅಸ್ಸಿ ಘಾಟ್ ಗೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಾರೆ. ಅಲ್ಲಿ ನಡೆದಾಡುತ್ತಿದ್ದರೆ ಸಾಕು, ಶವದ ವಾಸನೆ ಮೂಗಿಗೆ ಬಡಿಯುತ್ತದೆ. ನಾನು ಇಲ್ಲಿ ಸ್ನಾನ ಮಾಡುವುದನ್ನೇ ಕೆಲ ವರ್ಷಗಳ ಹಿಂದೆ ನಿಲ್ಲಿಸಿದ್ದೇನೆ. ಘಾಟ್ ನಲ್ಲಿ ನಿಂತು ಪ್ರಾರ್ಥನೆ ಮಾಡುತ್ತೇನೆ ಅಷ್ಟೆ ಎನ್ನುತ್ತಾರೆ ಸ್ಥಳೀಯ ಅರ್ಚಕ ಪಂಡಿತ್ ರಾಮದಾಸ್.
70 ವರ್ಷದ ಆಸುಪಾಸಿನಲ್ಲಿರುವ ರಾಮದಾಸ್ ಅವರು ತಮ್ಮ ಬಾಲ್ಯ ಜೀವನದಲ್ಲಿ ಗಂಗಾ ನದಿಯಲ್ಲಿ ಗಂಟೆಗಟ್ಟಲೆ ಈಜಾಡುತ್ತಿದ್ದುದನ್ನು ನೆನಪಿಸುತ್ತಾರೆ.''ನಾವು ಚಿಕ್ಕವರಿರುವಾಗಲೂ ಶವಗಳನ್ನು ಇಲ್ಲಿಗೆ ತಂದು ಅಂತ್ಯಸಂಸ್ಕಾರ ಮಾಡುತ್ತಿದ್ದರು. ಆದರೆ ಆ ಸಂಖ್ಯೆ ವಿರಳವಾಗಿತ್ತು. ಆಗ ನೀರು ಹೆಚ್ಚು ಮಲಿನವಾಗುತ್ತಿರಲಿಲ್ಲ. ಇಂದು ಪ್ರತಿದಿನ ಸಾವಿರಾರು ಶವಗಳನ್ನು ಇಲ್ಲಿಗೆ ತಂದು ಎಸೆಯುತ್ತಾರೆ. ಕೈಗಾರಿಕೆಗಳ ಮಲಿನ ನೀರು ನದಿಗೆ ಬಿಡಲಾಗುತ್ತದೆ. ಸಾಕು ಪ್ರಾಣಿಗಳಾದ ಹಸು, ಎಮ್ಮೆ, ಆಡು, ಕತ್ತೆ ಇತ್ಯಾದಿಗಳು ಸತ್ತರೆ ಅವುಗಳನ್ನು ಕೂಡ ತಂದು ಇಲ್ಲಿ ಎಸೆಯುತ್ತಾರೆ ಎನ್ನುತ್ತಾರೆ ರಾಮದಾಸ್.
ಈ ಬಗ್ಗೆ ಜಿಲ್ಲಾಧಿಕಾರಿ ವಿಜಯ್ ಕಿರಣ್ ಆನಂದ್ ಅವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.
ಪ್ರತಿವರ್ಷ ವಾರಣಾಸಿಯ ಎರಡೂ ಘಾಟ್ ಗಳಲ್ಲಿ ಸುಮಾರು 35 ಸಾವಿರ ಶವಗಳ ಅಂತ್ಯ ಸಂಸ್ಕಾರ ನಡೆಯುತ್ತವೆ. ಇದಕ್ಕೆ ಸುಮಾರು 18 ಸಾವಿರ ಟನ್ ಮರಗಳು ಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಗಂಗಾ ನದಿ ಸ್ವಚ್ಛತೆ ಬಗ್ಗೆ ಯೋಚಿಸಲು ಸಾಧ್ಯವೇ? ಎಂದು ಕೇಳುತ್ತಾರೆ ಬಿಡಿ ತ್ರಿಪಾಠಿ.
ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರದ ಪ್ರಕಾರ, ವಿಷ, ರಾಸಾಯನಿಕಗಳು ಮತ್ತು ಅಪಾಯಕಾರಿ ಬ್ಯಾಕ್ಟೀರಿಯಾಗಳು ಗಂಗಾ ನದಿ ನೀರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿವರಿಸಿದ ಸುರಕ್ಷತಾ ಮಿತಿಗಿಂತ 3 ಸಾವಿರ ಅವಧಿಯಷ್ಟು ಹೆಚ್ಚಾಗಿದೆಯಂತೆ.
ಪ್ರತಿದಿನ ಗಂಗಾ ನದಿಯಲ್ಲಿ ಎಷ್ಟು ಜನ ಮಿಂದೇಳುತ್ತಾರೆ ಎಂಬ ಬಗ್ಗೆ ಸರಿಯಾದ ಲೆಕ್ಕವಿಲ್ಲದಿದ್ದರೂ ಅಂದಾಜಿನ ಪ್ರಕಾರ, ವಾರಣಾಸಿಯ ವಿವಿಧ ಘಾಟ್ ಗಳಲ್ಲಿ ಪ್ರತಿದಿನ ಸುಮಾರು 80 ಸಾವಿರದಿಂದ ಒಂದು ಲಕ್ಷದವರೆಗೆ ಭಕ್ತರು ಮಿಂದೇಳುತ್ತಾರೆ.
ಇನ್ನು ಶ್ರಾವಣ ಮಾಸವಾಗಿರುವುದರಿಂದ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಎರಡೂವರೆ ಸಾವಿರ ಕಿಲೋ ಮೀಟರ್ ಉದ್ದದ ಗಂಗಾ ನದಿ ತೀರದಲ್ಲಿ ಸುಮಾರು 450 ದಶಲಕ್ಷ ಜನರು ವಾಸಿಸುತ್ತಿದ್ದಾರೆ. ಅಂದರೆ ವಿಶ್ವದ ಜನಸಂಖ್ಯೆಯ ಶೇಕಡಾ 6ರಷ್ಟು ಜನ, ನೀರಿಗೆ ಗಂಗಾ ನದಿಯನ್ನು ಅವಲಂಬಿಸಿಕೊಂಡಿದ್ದಾರೆ.
ಕೆಲವರು ಅಂತ್ಯಸಂಸ್ಕಾರ ಮಾಡಲು ಹಣವಿಲ್ಲದೆ ನೇರವಾಗಿ ನದಿಗೆ ಶವವನ್ನು ಎಸೆಯುವ ನಿದರ್ಶನಗಳಿವೆ. ಇದು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ ಎಂದು ಉತ್ತರ ಪ್ರದೇಶ ರಾಜ್ಯದ ಅಧಿಕಾರಿಗಳು ಹೇಳುತ್ತಿದ್ದರೂ ಇನ್ನೂ ಇದೆ ಎನ್ನುತ್ತಾರೆ ತಜ್ಞರು.