ನಿನ್ನೆ ವಾರಣಾಸಿಯಲ್ಲಿ ರೋಡ್ ಶೋ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
ನವದೆಹಲಿ: ತೀವ್ರ ಜ್ವರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಕ್ಷೇತ್ರ ವಾರಣಾಸಿಯಲ್ಲಿ ನಿನ್ನೆ ಚುನಾವಣಾ ರೋಡ್ ಶೋವನ್ನು ಅರ್ಧಕ್ಕೆ ಮೊಟಕುಗೊಳಿಸಿ ತಡರಾತ್ರಿ ದೆಹಲಿಗೆ ವಾಪಸಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ(ಆರ್ಆರ್ ಆಸ್ಪತ್ರೆ) ಹೆಚ್ಚಿನ ತಪಾಸಣೆಗೆ ಕರೆದೊಯ್ಯಲಾಯಿತು.
ಜ್ವರದಿಂದ ಬಳಲುತ್ತಿದ್ದ 69 ವರ್ಷದ ಸೋನಿಯಾ ಗಾಂಧಿ ನಿನ್ನೆ 8 ಕಿಲೋ ಮೀಟರ್ ರೋಡ್ ಶೋವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಚಾರ್ಟರ್ಡ್ ವಿಮಾನದಲ್ಲಿ ಮಧ್ಯರಾತ್ರಿ ವೇಳೆಗೆ ದೆಹಲಿಗೆ ಬಂದಿಳಿದರು.
ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ. ವಾರಣಾಸಿಯಲ್ಲಿ ಅವರಿಗೆ ಡಿಹೈಡ್ರೇಷನ್, ಜ್ವರ, ವಾಂತಿಯಾಯಿತು ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.
ವಾರಣಾಸಿಯಲ್ಲಿ ಅವರಿಗೆ ವೈದ್ಯರು ತುರ್ತು ಚಿಕಿತ್ಸೆ ನೀಡಿ ಅವರೊಡನೆ ವಿಮಾನದಲ್ಲಿ ದೆಹಲಿಗೆ ಆಗಮಿಸಿದರು.
ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಳೆದ ಕೆಲ ದಿನಗಳಿಂದ ತಮ್ಮ ತಾಯಿ ಅನಾರೋಗ್ಯಕ್ಕೀಡಾಗಿದ್ದರು. ಆದರೆ ನಿಗದಿತ ಕಾರ್ಯಕ್ರಮವನ್ನು ರದ್ದುಪಡಿಸುವುದು ಬೇಡವೆಂದು ವಾರಣಾಸಿಗೆ ತೆರಳಿದ್ದರು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸೋನಿಯಾ ಗಾಂಧಿಯವರನ್ನು ಹತ್ತಿರದ ಆರ್ ಆರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್ ಅವರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸೋನಿಯಾ ಅವರ ಆರೋಗ್ಯ ವಿಚಾರ ಕೇಳಿ ತಿಳಿದುಕೊಂಡರು.
ತಡರಾತ್ರಿ ಕಾಂಗ್ರೆಸ್ ಕಚೇರಿಯಿಂದ ಹೇಳಿಕೆ ಬಿಡುಗಡೆಗೊಂಡಿದ್ದು, ವಾರಣಾಸಿ ಭೇಟಿಯನ್ನು ಪೂರ್ಣಗೊಳಿಸಲಾಗದ್ದಕ್ಕೆ ಬೇಸರವಿದೆ. ಸದ್ಯದಲ್ಲಿಯೇ ಕಾಶಿ ವಿಶ್ವನಾಥ ದೇವಾಲಯದ ದರ್ಶನಕ್ಕೆ ಮತ್ತೆ ಬರುತ್ತೇನೆ. ನನ್ನ ಅಸೌಖ್ಯದಿಂದ ಭೇಟಿಯನ್ನು ಪೂರ್ಣಗೊಳಿಸಲಾಗದ್ದಕ್ಕೆ ವಿಷಾದವಿದೆ. ಶ್ರಾವಣ ಮಾಸದಲ್ಲಿ ಕಾಶಿ ವಿಶ್ವನಾಥನ ದರ್ಶನ ಮಾಡಲು ಸಾಧ್ಯವಾಗಲಿಲ್ಲ.
ಸದ್ಯದಲ್ಲಿಯೇ ನಾನು ಮತ್ತೆ ಬರುತ್ತೇನೆ. ವಾರಣಾಸಿಯ ಜನತೆಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಅವರು ತೋರಿದ ಪ್ರೀತಿ, ಕಾಳಜಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಅಧ್ಯಕ್ಷೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics