ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರೆದಿದ್ದು, ಭಾರಿ ಮಳೆಯಿಂದಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ ರೈಲು ಮತ್ತು ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ.
ಪ್ರಮುಖ ರಸ್ತೆಗಳಲ್ಲಿ ಮತ್ತು ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲು ಹಳಿಗಳ ಮೇಲೆ ಮಂಡಿಯವರೆಗೂ ನೀರು ನಿಂತಿರುವುದರಿಂದ ಬಹುತೇಕ ರೈಲುಗಳು ಸ್ಥಗಿತಗೊಂಡಿವೆ. ಇನ್ನು ಭಾರಿ ಮಳೆ ಹಾಗೂ ವ್ಯತಿರಿಕ್ತ ವಾತಾವರಣದಿಂದಾಗಿ ರನ್ ವೇ ನಲ್ಲಿ ಏನೂ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ಹೊರಡುವ ವಿಮಾನಗಳು ಕೂಡ ಸ್ಥಗಿತಗೊಂಡು ವಿಮಾನ ಪ್ರಯಾಣವನ್ನು ಮುಂದೂಡಲಾಗುತ್ತಿದೆ.
ಮುಂಬೈನ ಪ್ರತಿಷ್ಟಿತ ಪ್ರದೇಶಗಳಾದ ಬಾಂದ್ರಾ, ದಾದರ್, ಥಾಣೆ ಸೇರಿದಂತೆ ಬಹುತೇಕ ಪ್ರದೇಶಗಳು ಜಲಾವೃತ್ತಿಯಾಗಿದ್ದು, ಕೆಲ ಪ್ರದೇಶಗಳಲ್ಲಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ ಆ್ಯಂಬುಲೆನ್ಸ್ ಸೇವೆ ಕೂಡ ಸ್ಥಗಿತಗೊಂಡಿವೆ. ಇನ್ನು ಥಾಣೆಯ ಪ್ರಮುಖ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಯಾವುದೇ ರೀತಿ ಸಂಚಾರ ಸಾಧ್ಯವಾಗದೇ ಜನರು ಪರದಾಡುವಂತಾಗಿದೆ. ಹೀಗಾಗಿ ರಸ್ತೆಯಲ್ಲಿ ತುಂಬಿರುವ ನೀರು ಚರಂಡಿ ಸೇರುವಂತೆ ಮಾಡುವ ಕಾರ್ಯವನ್ನು ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ಸದಸ್ಯರು ಮಾಡುತ್ತಿದ್ದಾರೆ.
ಅತ್ತ ಭಾರಿ ಮಳೆಯಿಂದಾಗಿ ಇಡೀ ಮುಂಬೈ ನಗರ ಬಹುತೇಕ ಸ್ಥಬ್ದವಾಗಿದ್ದು, ಪರಿಸ್ಥಿತಿ ನಿಯಂತ್ರಣ ಕುರಿತು ಚರ್ಚಿಸಲು ಮುಂಬೈ ಮೇಯರ್ ಸಂಜಯ್ ಅವರ ನೇತೃತ್ವಜಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದ್ದು, ನಾಗರೀಕ ಪೂರೈಕೆ ಆಯುಕ್ತ ಸಂಜೀವ್ ಜೈಸ್ವಾಲ್ ಅವರು ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದಾರೆ.