ಮುಂಬೈ: ಮುಂಬೈ-ಗೋವಾ ಹೆದ್ದಾರಿ ಸೇತುವೆ ಕುಸಿತಗೊಂಡು 24 ಮಂದಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ವಾಣಿಜ್ಯ ನಗರಿ ಮುಂಬೈನಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದುಬಿದ್ದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈನ ಭಿವಾಂಡಿಯಲ್ಲಿರುವ ಹನುಮಾನ್ ಟೆಕ್ರಿ ಪ್ರದೇಶದಲ್ಲಿ ಇಂದು ಬೆಳಗ್ಗೆ 3 ಅಂತಸ್ತಿನ ಬಹುಮಹಡಿ ಕಟ್ಟಡ ಕುಸಿದಿದೆ. ಈ ವೇಳೆ ಕಟ್ಟಡದಲ್ಲಿ 9 ಮಂದಿ ಇದ್ದರು. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.
ಪ್ರಸ್ತುತ ಘಟನಾ ಪ್ರದೇಶಕ್ಕೆ ಎನ್ ಡಿಆರ್ ಎಫ್ ತಂಡ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದವಾರವಷ್ಚೇ ಇದೇ ಪ್ರದೇಶದಲ್ಲಿ 2 ಮಹಡಿಗಳ ಕಟ್ಟಡವೊಂದು ಕುಸಿದು 8 ಮಂದಿ ಸಾವಿಗೀಡಾಗಿ 20 ಮಂದಿ ಗಾಯಗೊಂಡಿದ್ದರು. ಈ ಘಟನೆ ನಡೆದ ವಾರದೊಳಗೆ ಮತ್ತೊಂದು ಕಟ್ಟಡ ಕುಸಿದಿದೆ.
ತಜ್ಞರ ಪ್ರಕಾರ ಭಿವಾಂಡಿ ಪ್ರದೇಶದಲ್ಲಿ ಸಾಕಷ್ಟು ಹಳೆಯ ಕಟ್ಟಡಗಳಿದ್ದು, ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡಗಳ ಗೋಡೆಗಳು ಶಿಥಿಲಗೊಂಡಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಪ್ರಸ್ತುತ ಕುಸಿದಿರುವ ಕಟ್ಟಡವನವ್ನು ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ 3 ವರ್ಷಗಳ ಹಿಂದೆಯೇ ಅಪಾಯಕಾರಿ ಕಟ್ಟಡ ಎಂದು ಘೋಷಿಸಿತ್ತು, ಹೀಗಿದ್ದೂ ಈ ಕಟ್ಟಡದಲ್ಲಿ ಜನ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.