ದೇಶ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ನಮ್ಮ ಸಹೋದರರಿಗೆ ಸ್ವಾತಂತ್ರ್ಯ ಸಿಗಬೇಕು: ಜಿತೇಂದರ್ ಸಿಂಗ್

Srinivasamurthy VN

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬೆನ್ನಲ್ಲೇ ಹೊಗೆಯಾಡುತ್ತಿದ್ದ ಕಾಶ್ಮೀರ ವಿವಾದ ಭುಗಿಲೆದಿದ್ದು, ಮತ್ತೊಂದು ಸ್ವಾತಂತ್ರ್ಯ ಹೋರಾಟ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಾಕಿ ಇದೆ ಎಂದು ಕೇಂದ್ರ ಸಚಿವ ಜಿತೇಂದರ್ ಸಿಂಗ್ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿತೇಂದರ್ ಸಿಂಗ್ ಅವರು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೋರಾಟ ನಡೆಸುತ್ತಿರುವ ಕಾಶ್ಮೀರ ಪ್ರಜೆಗಳಿಗೆ ಸ್ವಾತಂತ್ರ್ಯ ಸಿಗಬೇಕಿದ್ದು, ಅಲ್ಲಿ  ಮತ್ತೊಂದು ಸ್ವಾತಂತ್ರ್ಯ ಹೋರಾಟ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ಹಿಂಸಾಚಾರ ಹಿನ್ನಲೆಯಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ  ಅಂಗ, ಬಲೂಚಿಸ್ತಾನ, ಗಿಲ್ಗಿಟ್ ಮತ್ತು ಬಾಲ್ಟಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ವಿಶ್ವಸಮುದಾಯಕ್ಕೆ ಉತ್ತರ ನೀಡಲೇಬೇಕು ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ  ಹೇಳಿಕೆ ಬೆನ್ನಲ್ಲೇ ಕಾಶ್ಮೀರ ವಿವಾದ ಉಭಯ ದೇಶಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಅತ್ತ ಪ್ರತ್ಯೇಕತಾವಾದಿ ಮುಖಂಡರು ಖಂಡಿಸಿ ಕಾಶ್ಮೀರ ಭಾರತದ ಆಂತರಿಕ ವಿಚಾರವಲ್ಲ ಎಂದು ಖಂಡಿಸುತ್ತಿದ್ದರೆ, ಇತ್ತ ಭಾರತ ಸರ್ಕಾರ  ಕಾಶ್ಮೀರವಷ್ಟೇ ಅಲ್ಲ ಪಾಕ್ ಆಕ್ರಮಿತ ಕಾಶ್ಮೀರ ಕೂಡ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದೆ.

SCROLL FOR NEXT