ದೇಶ

ಮ್ಯಾನ್ ಹೋಲ್ ನಲ್ಲಿ ನಾಲ್ವರ ಶವ ಪತ್ತೆ

Shilpa D

ಹೈದರಾಬಾದ್: ಮ್ಯಾನ್​ಹೋಲ್ ಶುಚಿಗೊಳಿಸಲು ಒಳಗಿಳಿದಾಗ ಉಸಿರಾಟದ ತೊಂದರೆಗೆ ಸಿಲುಕಿದ ಮೂವರು ನೈರ್ಮಲ್ಯ ನೌಕರರು ಮತ್ತು ಅವರನ್ನು ರಕ್ಷಿಸಲೆಂದು ಇಳಿದ ಕ್ಯಾಬ್ ಚಾಲಕ ಗಂಗಾಧರ ಸಹಿತ ನಾಲ್ವರು ಉಸಿರು ಕಟ್ಟಿ ಮೃತರಾದ ಘಟನೆ ಹೈದರಾಬಾದ್ ಮಾದಾಪುರ ಪ್ರದೇಶದಲ್ಲಿ ಸಂಭವಿಸಿದೆ.

ಸಿಕಂದರಾಬಾದ್ ತಾರ್ನಾಕಾದವರಾದ ಶ್ರೀನಿವಾಸ, ನಾಗೇಶ, ಸತ್ಯಾನಾರಾಯಣ ಮೃತರಾದ ನೈರ್ಮಲ್ಯ ನೌಕರರು. ಮ್ಯಾನ್​ಹೋಲ್​ನ 25 ಅಡಿ ಒಳಗಿಳಿದ ಕಾರ್ಮಿಕರು ವಿಷಾನಿಲ ಸೇವನೆಯಿಂದ ಉಸಿರಾಟ ಸಮಸ್ಯೆಯಿಂದ ಕೂಗಿಕೊಂಡರು. ಅವರ ಧ್ವನಿ ಕೇಳಿ ಮೇಲಿದ್ದ ಕ್ಯಾಬ್ ಚಾಲಕ ರಕ್ಷಣೆಗೆ ಕೆಳಗಿಳಿದಿದ್ದು ಅವರೊಡನೆಯೇ ಸಾವನ್ನಪ್ಪಿದ ಎಂದು ವರದಿಗಳು ತಿಳಿಸಿವೆ.

ಹಗ್ಗದ ನೆರವಿನೊಂದಿಗೆ ಕೆಳಕ್ಕೆ ಇಳಿದ 108 ಆಂಬುಲೆನ್ಸ್ ಸೇವೆಯ ನೌಕರ ಚಂದು ಕೂಡಾ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಜೂನ್ ತಿಂಗಳಲ್ಲಿ ಇದೇ ಮ್ಯಾನ್ ಹೋಲ್​ಗೆ ಬಿದ್ದು ಪಾದಚಾರಿಯೊಬ್ಬರು ಸಾವನ್ನಪ್ಪಿದ್ದರು.

ಯಾವುದೇ ರಕ್ಷಣೆ ಪರಿಕರ ಬಳಸದೆ ಕೆಳಗಿಳಿದಿರುವುದು ಘಟನೆಗೆ ಕಾರಣ ಎನ್ನಲಾಗಿದೆ.ಉಪ ಗುತ್ತಿಗೆದಾರನ ವಿರುದ್ಧವೂ ಕೇಸ್ ದಾಖಲಿಸಿದ್ದು, ಮೃತರ ಕುಟುಂಬಕ್ಕೆ ತಲಾ 2.5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

SCROLL FOR NEXT