ನವದೆಹಲಿ: ಪಾಕಿಸ್ತಾನ ತನ್ನದೇ ಆದ ಬಲೂಚಿಸ್ತಾನವನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದರೂ ಸಹ ತನ್ನ ಸ್ವಾತಂತ್ರ್ಯಾದಿನಾಚರಣೆಯನ್ನು ಕಾಶ್ಮೀರದ ಸ್ವಾತಂತ್ರ್ಯಕ್ಕೆ ಅರ್ಪಿಸಿದೆ. ನವದೆಹಲಿಯಲ್ಲಿರುವ ಪಾಕಿಸ್ತಾನದಲ್ಲಿರುವ ರಾಯಭಾರ ಕಚೇರಿಯಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ದಿನವನ್ನಾಚರಿಸಿ ಮಾತನಾಡಿದ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್, ಪಾಕಿಸ್ತಾನ ಕಾಶ್ಮೀರದ ಸ್ವಾಯತ್ತತೆಗಾಗಿ ಸಂಪೂರ್ಣ ರಾಜತಾಂತ್ರಿಕ ನೆರವನ್ನು ನೀಡಲಿದೆ ಎಂದು ಘೋಷಿಸಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದ್ದರೂ, ಪಾಕಿಸ್ತಾನ ಕಾಶ್ಮೀರ ವಿಚಾರವಾಗಿ ಸಂಪೂರ್ಣ ರಾಜತಾಂತ್ರಿಕ ಬೆಂಬಲ ನೀಡುವುದಾಗಿ ಘೋಷಿಸಿದೆ. ಪಾಕಿಸ್ತಾನ ತನ್ನ ಸ್ವಾತಂತ್ರ್ಯ ದಿನಾಚರಣೆಯಂದೇ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಈ ಬೆನ್ನಲ್ಲೇ ಅಬ್ದುಲ್ ಬಸಿತ್ ಕಾಶ್ಮೀರ ಸ್ವಾಯತ್ತತೆಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಎಷ್ಟೇ ರಾಜಕೀಯ ಶಕ್ತಿ ಬಳಸಿದರೂ ಸಹ ಕಾಶ್ಮೀರದ ಜನತೆಯ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಅಬ್ದುಲ್ ಬಸಿತ್ ಹೇಳಿದ್ದಾರೆ.