ದೇಶ

ಭದ್ರತಾ ಸಿಬ್ಬಂದಿಗಳಿಂದ ಎನ್ ಕೌಂಟರ್; 4 ನಕ್ಸಲರ ಸಾವು

Srinivasamurthy VN

ರಾಯ್ ಪುರ: ನಕ್ಸಲ್ ಪೀಡಿತ ಛತ್ತೀಸ್ ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ನಡೆದ ಎನ್ ಕೌಂಟರ್ ನಲ್ಲಿ ನಾಲ್ಕು ಮಂದಿ ನಕ್ಸಲರನ್ನು ಹತ್ಯೆಗೈಯುವಲ್ಲಿ  ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಛತ್ತೀಸ್ ಗಢದ ದಾಂತೆವಾಡದ ದಬ್ಬ-ಕುನ್ನಾ ಗುಡ್ಡಗಾಡು ಪ್ರದೇಶದಲ್ಲಿ ನಕ್ಸಲರು ಅವಿತಿರುವ ಕುರಿತ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಗಳು ಇಂದು ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆ  ಆರಂಭಿಸಿದ್ದರು. ಭದ್ರತಾ ಸಿಬ್ಬಂದಿಗಳ ಆಗಮಿಸುತ್ತಿದ್ದಂತೆಯೇ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದಾರೆ. ಕೂಡಲೇ ಪ್ರತಿದಾಳಿ ಆರಂಭಿಸಿದ ಭದ್ರತಾಪಡೆಗಳು ನಾಲ್ಕು ಮಂದಿ ನಕ್ಸಲರನ್ನು  ಹೊಡೆದುರುಳಿಸಿದೆ. ಈ ನಾಲ್ಕು ಮಂದಿಯ ಪೈಕಿ ಓರ್ವ ಮಹಿಳೆ ಕೂಡ ಸೇರಿದ್ದು, ಈಕೆ ಮಹಿಳಾ ಕೇಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ದಾಂತೆವಾಡ ಪೊಲೀಸ್ ವರಿಷ್ಠಾಧಿಕಾರಿ ಕಮ್ಲೋಚನ್ ಕಶ್ಯಪ್ ಅವರು, ಕಳೆದ ರಾತ್ರಿಯೇ ಕಾರ್ಯಾಚರಣೆ ಆರಂಭವಾಗಿದೆ. ದಬ್ಬ-ಕುನ್ನಾ ಗುಡ್ಡಗಾಡು  ಪ್ರದೇಶದ ಗ್ರಾಮಗಳಲ್ಲಿ ನಕ್ಸಲರು ಅವಿತಿದ್ದರು. ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ನಾಲ್ಕು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ. ಅಲ್ಲದೆ ಓರ್ವ ನಕ್ಸಲ್ ವಿರೋಧಿ ಯೋಧನಿಗೆ ಗಂಭೀರ  ಗಾಯವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಘಟನಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ವ್ಯಾಪಕ ಶೋಧ ನಡೆಸುತ್ತಿದ್ದು, ಮತ್ತಷ್ಟು ನಕ್ಸಲರು ಅವಿತಿರುವ ಶಂಕೆ ವ್ಯಕ್ತವಾಗಿದೆ.

SCROLL FOR NEXT