ದೇಶ

ಕೇಜ್ರಿವಾಲ್ ಜತೆ ಮಾತುಕತೆ ವಿಫಲ, ನವಜೋತ್ ಸಿಂಗ್ ಸಿಧುಗೆ ಕಾಂಗ್ರೆಸ್ ಗಾಳ

Lingaraj Badiger
ನವದೆಹಲಿ: ಮಾಜಿ ರಾಜ್ಯಸಭಾ ಸದಸ್ಯ ನವಜೋತ್ ಸಿಂಗ್ ಸಿಧು ಅವರೊಂದಿಗೆ ಆಪ್ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಡೆಸಿದ ಮಾತುಕತೆ ವಿಫಲವಾಗಿದ್ದು, ಈಗ ಮಾಜಿ ಕ್ರಿಕೆಟಿಗನಿಗೆ  ಕಾಂಗ್ರೆಸ್ ಗಾಳ ಹಾಕಿದೆ. 
ಮೂಲಗಳ ಪ್ರಕಾರ, ನವಜೋತ್ ಸಿಂಗ್ ಸಿಧು ಜೊತೆ ಮಾತುಕತೆ ನಡೆಸಲು ಕಾಂಗ್ರೆಸ್ ಸಿದ್ಧವಿದ್ದು, ಅವರಿಗೆ ಅಧಿಕೃತ ಆಹ್ವಾನ ನೀಡುವ ಬಗ್ಗೆ ಪಕ್ಷ ಚಿಂತಿಸುತ್ತಿದೆ ಎನ್ನಲಾಗಿದೆ.
ಸಿಧು ಅವರು ಇತ್ತೀಚೆಗಷ್ಟೇ ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ನಂತರ ಸಿಧು ಆಪ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅಲ್ಲದೆ ಈ ಸಂಬಂಧ ಕೇಜ್ರಿವಾಲ್ ಅವರೊಂದಿಗೆ ಸಿಧು ಕಳೆದ ವಾರ ಮಾತುಕತೆ ನಡೆಸಿದ್ದಾರೆ. ಸಿಧು ತಮ್ಮನ್ನು ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೊಷಿಸಬೇಕು. ಪ್ರಸ್ತುತ ಪಂಜಾಬ್ ಬಿಜೆಪಿ ಶಾಸಕಿಯಾಗಿರುವ ಸಿಧು ಪತ್ನಿ ನವಜೋತ್ ಕೌರ್ ಸಿಧುಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಸಲ್ಲಿಸಿದ್ದರು. ಆದರೆ ಕೇಜ್ರಿವಾಲ್ ಸಿಧು ಬೇಡಿಕೆಗೆ ಮನ್ನಣೆ ನೀಡದೆ ಕೇವಲ ತಾರಾ ಪ್ರಚಾರಕರಾಗಿ ಕೆಲಸ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಜತೆಗೆ ಪಕ್ಷದಲ್ಲಿ ತಳ ಮಟ್ಟದಿಂದ ಕೆಲಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆಯಬೇಕು. ಜತೆಗೆ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡುವ ಆಪ್ ಪಕ್ಷದ ನಿಯಮದ ಕುರಿತೂ ಸಹ ತಿಳಿಸಿದ್ದಾರೆ. ಹಾಗಾಗಿ ಕೇಜ್ರಿವಾಲ್ ಜತೆಗಿನ ಮಾತುಕತೆ ಮುರಿದು ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್​ಗೆ ಸಿಧು ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಮಾತುಕತೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೊಷಣೆ ಮಾಡಲು ಸಾಧ್ಯವಿಲ್ಲ. ಆದರೆ ಅವರಿಗೆ 2-3 ವರ್ಷಗಳ ಬಳಿಕ ಉಪಮುಖ್ಯಮಂತ್ರಿ ಹುದ್ದೆ ನೀಡಲು ಚಿಂತಿಸಬಹುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
SCROLL FOR NEXT