ಇಸ್ಲಾಮಾಬಾದ್: ಭಯೋತ್ಪಾದನೆ ಕುರಿತು ಚರ್ಚೆ ನಡೆಸುವ ಭಾರತದ ಆಹ್ವಾನವನ್ನು ತಿರಸ್ಕರಿಸಿರುವ ಪಾಕಿಸ್ತಾನ, ಕಾಶ್ಮೀರ ವಿಷಯವನ್ನು ಚರ್ಚಿಸಲು ಭಾರತ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಎಸ್ ಜೈಶಂಕರ್ ಗೆ ಮತ್ತೊಮ್ಮೆ ಆಹ್ವಾನ ನೀಡಿದೆ.
ಕಾಶ್ಮೀರದಲ್ಲಿ ನಡೆಸಲಾಗುತ್ತಿರುವ ಮಾನವ ಹಕ್ಕು ಉಲ್ಲಂಘನೆಯನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿರುವ ಪಾಕಿಸ್ತಾನ, ತನ್ನ ದೇಶದ ವೈದ್ಯರು ಕಾಶ್ಮೀರಕ್ಕೆ ಭೇಟಿ ನೀಡುವುದಕ್ಕೆ ಅನುಮತಿ ನೀಡಬೇಕೆಂದು ಕೋರಿದೆ. ವಿದೇಶಾಂಗ ಕಾರ್ಯದರ್ಶಿಗಳೊಂದಿಗಿನ ಮಾತುಕತೆ ಬಗ್ಗೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಅಜೀಜ್ ಅಹ್ಮದ್ ಚೌಧರಿ, ಭಯೋತ್ಪಾದನೆ ಕುರಿತ ಚರ್ಚೆಗೆ ಭಾರತ ಆಹ್ವಾನ ನೀಡಿರುವುದಕ್ಕೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ ಎಂದು ತಿಳಿಸಿದ್ದಾರೆ.
ಕಾಶ್ಮೀರಕ್ಕೆ ಸಂಬಂಧಿಸಿದಂತೆ ನ್ಯಾಯಸಮ್ಮತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕಿರುವುದರಿಂದ ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಚರ್ಚಿಸಬೇಕಾಗಿದೆ ಎಂದು ಭಾರತಕ್ಕೆ ನೀಡಿರುವ ಉತ್ತರದಲ್ಲಿ ಪಾಕಿಸ್ತಾನ ತಿಳಿಸಿದೆ. ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ-ಪಾಕಿಸ್ತಾನಕ್ಕೆ ಇರುವ ಬಾಧ್ಯತೆಯಾಗಿರುವ ಹಿನ್ನೆಲೆಯಲ್ಲಿ, ಭಾರತ ತನ್ನೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಬೇಕು ಎಂದು ಪಾಕ್ ಭಾರತವನ್ನು ಮಾತುಕತೆಗೆ ಅಹವಾನಿಸಿದೆ.