ಮೋಹನ್ ಭಾಗವತ್ (ಸಂಗ್ರಹ ಚಿತ್ರ)
ನವದೆಹಲಿ: ಇಲ್ಲಿ ಕಾರ್ಯಕ್ರಮವೊಂದರಲ್ಲಿ ಶಿಕ್ಷಕರಿಂದ ಹಲವು ದೂರುಗಳು ಮತ್ತು ಬೇಡಿಕೆಗಳನ್ನು ಎದುರಿಸಿದ ನಂತರ ಪ್ರತಿಕ್ರಿಯೆ ನೀಡಿದ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ತಾವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಂದೇಶವಾಹಕನಲ್ಲ, ನೀವು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವದೇಕರ್ ಅವರನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಸುಮಾರು 2 ಸಾವಿರ ಯುವ ಶಿಕ್ಷಕರು, ವಿಶ್ವವಿದ್ಯಾಲಯದ ಬೋಧಕರು, ಶಿಕ್ಷಣ ತಜ್ಞರು ಸೇರಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಟುಂಬ ಮೌಲ್ಯಕ್ಕಾಗಿ ಕೆಲಸ ಮಾಡಬೇಕು ಮತ್ತು ಮಕ್ಕಳಲ್ಲಿ ದೇಶಭಕ್ತಿ ಹುಟ್ಟಿಸುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಕ್ತಿ ಹೆಚ್ಚಿಸುವ ಮತ್ತು ಬದಲಾವಣೆ ಉಂಟುಮಾಡುವ ಕೆಲಸವನ್ನು ಶಿಕ್ಷಕರು ಮಾಡುವಂತೆ ಒತ್ತಾಯಿಸಿದರು.
ಶಿಕ್ಷಕರು ಹಲವು ಸಮಸ್ಯೆಗಳನ್ನು ಮೋಹನ್ ಭಾಗವತ್ ಮುಂದಿಟ್ಟರು. ಆಗ ಅವರು, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಆದರೆ ತಾವು ಎನ್ ಡಿಎ ಸರ್ಕಾರದ ಪ್ರತಿನಿಧಿಯಲ್ಲ. ನಿಮ್ಮ ಸಮಸ್ಯೆಗಳನ್ನು ನನಗೆ ಪರಿಹರಿಸಲು ಸಾಧ್ಯವಿಲ್ಲ. ಸರ್ಕಾರದ ಮಟ್ಟದಲ್ಲಿಯೇ ನೀವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ನಿಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದಿಡಲು ನಾನು ಕೂಡ ಪ್ರಯತ್ನಿಸುತ್ತೇನೆ ಎಂದರು.
ದೇಶದಲ್ಲಿ ಹಿಂದೂ ಜನಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಕೇಳಿದಾಗ, ಇದು ಇಂದಿನ ಸಾಮಾಜಿಕ ಪರಿಸರದಿಂದಾಗಿ ಹೀಗಾಗುತ್ತಿದೆ. ಯಾವ ಕಾನೂನಿನಲ್ಲಿಯೂ ಹಿಂದೂ ಜನಸಂಖ್ಯೆ ಹೆಚ್ಚಾಗಬಾರದು ಎಂದು ಹೇಳಿಲ್ಲ. ಅದು ಇಂದಿನ ಸಾಮಾಜಿಕ ಪರಿಸ್ಥಿತಿಯಿಂದಾಗಿ ಹೀಗಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos