ಕಠ್ಮಂಡು: ಭಾರತೀಯ ಮೂಲದ ವ್ಯಕ್ತಿಯೊಬ್ಬ ನೇಪಾಳದ ಮಹೊತ್ತಾರಿ ಜಿಲ್ಲೆಯ ದಮ್ಹಿಮದಾಯ್ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಸೋಮವಾರ ನಡೆದಿದೆ.
ರಾಮ್ ಸ್ನೇಹಿ ಸದಾ (55) ಆತ್ಮಹತ್ಯೆಗೆ ಶರಣಾಗಿರುವ ಭಾರತೀಯನಾಗಿದ್ದಾನೆ. ಬಿಹಾರದ ಸೀತಾಮರ್ಹಿ ಜಿಲ್ಲೆಯ ಸಿರ್ಸಿಯಾ ಮೂಲದವರಾಗಿರುವ ರಾಮ್ ಸ್ನೇಹಿ ಅವರು, ಕೆಲಸ ದಿನಗಳ ಹಿಂದಷ್ಟೇ ನೇಪಾಳದಲ್ಲಿ ನೆಲೆಯೂರಿರುವ ತಮ್ಮ ಸಂಬಂಧಿಕ ಬಿಜೋ ಸದಾ ಅವರ ಮನೆಗೆ ಹೋಗಿದ್ದರು.
ನಂತರ ಭಾರತಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ, ದಮ್ಹಿಮದಾಯ್ ನ ರಾಣಿ ರತಾವರದ ರಸ್ತೆಯ ಬಳಿ ಇದ್ದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ರಾಮ್ ಸ್ನೇಹಿ ಸದಾ ಅವರ ಮೃತದೇಹವನ್ನು ಜಲೇಶ್ವರದಲ್ಲಿರುವ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.