ಪಾಟ್ನಾ: ತೀವ್ರ ಪ್ರವಾಹದಿಂದ ಕಂಗೆಟ್ಟಿರುವ ಜನತೆಗೆ ನಿಮ್ಮ ಮನೆಗೆ ಗಂಗಾಜಲ ಬಂದಿರುವುದು ಅದೃಷ್ಟವೆಂದು ಹೇಳುವ ಮೂಲಕ ತೀವ್ರ ಟೀಕೆಗಳಿಗೆ ಒಳಗಾಗಿದ್ದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಗುರುವಾರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹೇಳಿಕೆ ಕುರಿತಂತೆ ಮಾತನಾಡಿರುವ ಅವರು, ಗಂಗೆಯಿಂದಾಗಿ ಸಾಕಷ್ಟು ಸಮಸ್ಯೆಯುಂಟಾಗಿದೆ ಎಂದು ನಾನು ಒಪ್ಪುತ್ತೇನೆ. ಆದರೆ, ಅದರಿಂದ ಸಾಕಷ್ಟು ಲಾಭವೂ ಇದೆ. ಪ್ರತಿಕೂಲ ಹವಾಮಾನದಿಂದ ಜನರಿಗೆ ಸಾಕಷ್ಟು ನಷ್ಟವುಂಟಾಗಿದೆ ಎಂದು ಹೇಳಿದ್ದಾರೆ.
ಜಾರ್ಖಾಂಡ್ ನಲ್ಲಿ ಬಿಜೆಪಿ ಆಡಳಿತ ಸರ್ಕಾರ ಜನರಿಗೆ ಮಾಹಿತಿ ನೀಡದೆಯೇ ನೀರನ್ನು ಬಿಡುಗಡೆ ಮಾಡಿದೆ. ಇದರ ಪರಿಣಾಮ ರಾಜ್ಯದಲ್ಲಿ ಪ್ರವಾಹ ಉಂಟಾಗಿದೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪ್ರವಾಹ ಪೀಡಿ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದ ಲಾಲು ಪ್ರಸಾದ್ ಯಾದವ್ ಅವರು, ಪ್ರತಿಯೊಬ್ಬರ ಮನೆಗೂ ಗಂಗಾಜಲ ಬರುವುದಿಲ್ಲ. ಆದರೆ, ನೀವು ಅದೃಷ್ಟವಂತರು. ಹೀಗಾಗಿ ಗಂಗೆ ನಿಮ್ಮ ಮನೆಗೆ ಬಂದಿದ್ದಾಳೆ. ಗಂಗಾಮಾತೆ ಎಲ್ಲರನ್ನೂ ರಕ್ಷಿಸುತ್ತಾಳೆಂದು ಹೇಳಿದ್ದರು. ಈ ಹೇಳಿಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.