ನವದೆಹಲಿ: ತ್ರಿವಳಿ ತಲಾಕ್ ಸಿಂಧುತ್ವವನ್ನು ಪ್ರಶ್ನಿಸಿ ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ತಲಾಕ್ ನ್ನು ಪ್ರಶ್ನಿಸಿ ಶಾಯರಾ ಬಾನು ಸೇರಿದಂತೆ ಹಲವು ಮುಸ್ಲಿಂ ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಈಗಾಗಲೇ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದು, ಈಗ ಇಶ್ರಾತ್ ಜಹಾನ್ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ಬಾಕಿ ಇರುವ ಪ್ರಕರಣಗಳ ಪಟ್ಟಿಗೆ ಸೇರಿಸಿದೆ.
ತ್ರಿವಳಿ ತಲಾಕ್ ನ್ನು ಪ್ರಶ್ನಿಸಿರುವ ಇಶ್ರಾತ್ ಜಹಾನ್, ಮುಸ್ಲಿಂ ವೈಯಕ್ತಿಕ ಕಾನೂನು(ಷರಿಯತ್) ನ ಸೆಕ್ಷನ್ 2 ಅಸಂವಿಧಾನಿಕವಾಗಿದ್ದು, ದೇಶದ ಕಾನೂನಿನಲ್ಲಿ ನೀಡಲಾಗುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೆ ಏಕಪಕ್ಷೀಯ ತ್ರಿವಳಿ ತಲಾಕ್ ಮಹಿಳೆಯ ಹಕ್ಕುಗಳನ್ನು ಕಸಿದುಕೊಳ್ಳಬಹುದೇ? ಎಂದು ಪ್ರಶ್ನಿಸಿದ್ದಾರೆ. ತ್ರಿವಳಿ ತಲಾಕ್ ವಿರುದ್ಧ ಅಖಿಲ ಭಾರತೀಯ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ಸಹ ಧ್ವನಿ ಎತ್ತಿದೆ. ಕೆಲವು ವರದಿಗಳ ಪ್ರಕಾರ ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ತ್ರಿವಳಿ ತಲಾಕ್ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.