ಜಾಮೀನಿನ ಮೇಲೆ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ಬೆರಳು ಕತ್ತರಿಸಿದ ಆರೋಪಿ
45 ವರ್ಷದ ವ್ಯಕ್ತಿಯೊಬ್ಬ ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಸಂತ್ರಸ್ತ ಮಹಿಳೆಯ ಎರಡು ಬೆರಳುಗಳನ್ನು ಕತ್ತರಿಸಿದ ಘಟನೆ ಮಧ್ಯಪ್ರದೇಶದ...
ತಿಕಮ್ ಗರಾ: 45 ವರ್ಷದ ವ್ಯಕ್ತಿಯೊಬ್ಬ ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಸಂತ್ರಸ್ತ ಮಹಿಳೆಯ ಎರಡು ಬೆರಳುಗಳನ್ನು ಕತ್ತರಿಸಿದ ಘಟನೆ ಮಧ್ಯಪ್ರದೇಶದ ತಿಕಮ್ ಗರಾ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಕುನ್ವರ್ ಲಾಲ್ ಎರಡು ವರ್ಷಗಳ ಹಿಂದೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಪಾಲಾಗಿದ್ದ. ಆದರೆ ಕಳೆದ ತಿಂಗಳಷ್ಟೇ ಆರೋಪಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ತನ್ನ ವಿರುದ್ಧ ಆರೋಪ ಮಾಡಿದ್ದ ಮಹಿಳೆಯ ಬೆರಳು ಕಟ್ ಮಾಡಿದ ಕನ್ವರ್ ಲಾಲ್ ನನ್ನು ನಿನ್ನೆ ರಾತ್ರಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣವನ್ನು ರಾಜಿ ಮೂಲಕ ಇತ್ಯಾರ್ಥ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ಆರೋಪ ಕನ್ವರ್ ಲಾಲ್ ಹಾಗೂ ಆತನ ಇಬ್ಬರು ಸಹಚರರಾದ ಮಹೇಂದ್ರ ಯಾದವ್ ಮತ್ತು ಭಗ್ವಾನ್ ಯಾದವ್ ಸೇರಿ ತನ್ನ ಬೆರಳು ಕಟ್ ಮಾಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಜರೋಣ್ ಪೊಲೀಸರು ಆರೋಪಿಯನ್ನು ರಕ್ಷಿಸುತ್ತಿರುವುದಾಗಿಯೂ ಮಹಿಳೆ ಆರೋಪಿಸಿದ್ದಾರೆ. ಕನ್ವರ್ ಲಾಲ್ ನಿಂದ ತನಗೆ ಜೀವ ಬೆದರಿಕೆ ಇರುವುದಾಗಿ ದೂರು ನೀಡಿದ್ದರು ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಕನ್ವರ್ ಲಾಲ್ ನನ್ನು ಬಂಧಿಸಿರುವ ಪೊಲೀಸರು ಇತರೆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.