ನವದೆಹಲಿ: ಗುಜರಾತ್ ಕೇಡರ್ ನ ಐಪಿಎಸ್ ಅಧಿಕಾರ ರಾಕೇಶ್ ಅಸ್ಥನಾ ಅವರು ಶುಕ್ರವಾರ ಕೇಂದ್ರಿಯ ತನಿಖಾ ತಂಡ(ಸಿಬಿಐ)ದ ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸಿಬಿಐ ನಿರ್ದೇಶಕ ಅನಿಲ್ ಕುಮಾರ್ ಸಿನ್ಹಾ ಅವರು ಇಂದು ನಿವೃತ್ತಿಯಾಗಿದ್ದು, ಅವರ ನಂತರದ ಸ್ಥಾನದಲ್ಲಿದ್ದ ರಾಕೇಶ್ ಅಸ್ಥನಾ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
ಈ ಮಧ್ಯೆ ಕೇಂದ್ರ ಸರ್ಕಾರ ಇದುವರೆಗೂ ತನಿಖಾ ಸಂಸ್ಥೆಯ ಯಾವುದೇ ಪೂರ್ಣಾವಧಿ ಮುಖ್ಯಸ್ಥರ ಹೆಸರನ್ನು ಪ್ರಸ್ತಾಪಿಸಿಲ್ಲ.
ಅಸ್ಥನಾ ಅವರು 1984ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು, ಸಿಬಿಐನಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದಷ್ಟೇ ಸಿಬಿಐ ನೂತನ ನಿರ್ದೇಶಕರ ಸ್ಥಾನದ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಸಿಬಿಐ ವಿಶೇಷ ನಿರ್ದೇಶಕ ಆರ್ ಕೆ ದತ್ ಅವರನ್ನು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು ಮತ್ತು ಇದೇ ಮೊದಲ ಬಾರಿಗೆ ಗೃಹ ಸಚಿವಾಲಯದಲ್ಲಿ ಸರ್ಕಾರ ವಿಶೇಷ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿ ಮಾಡಿದೆ.
ದತ್ ಅವರು ಗೃಹ ಸಚಿವಾಲಯಕ್ಕೆ ಸ್ಥಳಾಂತರಗೊಂಡಿದ್ದರಿಂದ ಹೆಚ್ಚುವರಿ ನಿರ್ದೇಶಕ ಅಸ್ಥನಾ ಅವರಿಗೆ ತನಿಖಾ ಸಂಸ್ಥೆಯ ಉನ್ನತ ಸ್ಥಾನ ಒಲಿದು ಬಂದಿದೆ.