ಅಹಮದಾಬಾದ್: ಕಳೆದ ಅಕ್ಟೋಬರ್ ನಲ್ಲಿ ದಾಖಲೆಗಳಿಲ್ಲದ ಬರೊಬ್ಬರಿ 13 ಸಾವಿರ ಕೋಟಿ ರುಪಾಯಿ ಕಪ್ಪುಹಣವನ್ನು ಘೋಷಿಸಿ ನಂತರ ನಾಪತ್ತೆಯಾಗಿದ್ದ ಅಹಮದಾಬಾದ್ ಮೂಲದ ವ್ಯಾಪಾರಿ ಮಹೇಶ್ ಶಾ ಅವರನ್ನು ಐಟಿ ಅಧಿಕಾರಿಗಳು ಡಿ.3 ರಂದು ಬಂಧಿಸಿದ್ದಾರೆ.
ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಮಹೇಶ್ ಶಾ, ಅಹಮದಾಬಾದ್ ನ ಟಿವಿ ಸ್ಟುಡಿಯೋ ಒಂದರಲ್ಲಿ ಪತ್ತೆಯಾಗಿದ್ದಾರೆ. ತೆರಿಗೆ ಅಧಿಕಾರಿಗಳಿಂದ ಬಂಧನಕ್ಕೊಳಗಾದ ನಂತರ ಹೇಳಿಕೆ ನೀಡಿರುವ ಮಹೇಶ್ ಶಾ, ತಾವು ಘೋಷಿಸಿದ್ದ ಬೃಹತ್ ಪ್ರಮಾಣದ ಹಣ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಸೇರಿದ್ದು ನಾನು ಕಮಿಷನ್ ಗಾಗಿ ಈ ಕೆಲಸವನ್ನು ಮಾಡಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಕುರಿತು ಮತ್ತಷ್ಟು ಮಾಹಿತಿಯನ್ನು ಬಹಿರಂಗಗೊಳಿಸುವುದಾಗಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಸಹಕರಿಸಿ ಕೆಲವು ಹೆಸರುಗಳನ್ನು ಐಟಿ ಅಧಿಕಾರಿಗಳ ಎದುರು ಘೋಷಿಸುವುದಾಗಿ ಶಾ ತಿಳಿಸಿದ್ದು, ನಾನು ನಾಪತ್ತೆಯಾಗಿರಲಿಲ್ಲ. ಮಾಧ್ಯಮಗಳಿಂದ ದೂರ ಉಳಿಯುವುದಕ್ಕೆ ಕಾರಣಗಳಿದೆ ಎಂದು ಹೇಳಿದ್ದಾರೆ.
ಐಡಿಎಸ್ ಯೋಜನೆಯಡಿ ಕಪ್ಪುಹಣ ಘೋಷಿಸಿಕೊಂಡವರಿಗೆ ತೆರಿಗೆ ಹಣದ ಕಂತನ್ನು ಪಾವತಿಸಿದಾಕ್ಷಣ ಆದಾಯ ತೆರಿಗೆ ಇಲಾಖೆಯ ಕಾನೂನು ಕ್ರಮಗಳಿಂದ ರಕ್ಷಣೆ ಸಿಗುತ್ತದೆ. ಅದರಂತೆ ಕಾಳಧನ ಘೋಷಿಸಿಕೊಂಡಿದ್ದ ಮಹೇಶ್ ಮೊದಲ ಕಂತಿನ ಕೇವಲ 975 ಕೋಟಿ ರುಪಾಯಿ ತೆರಿಗೆ ಪಾವತಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ದಾಖಲೆಗಳಿಲ್ಲದ ಬರೊಬ್ಬರಿ 13 ಸಾವಿರ ಕೋಟಿ ರುಪಾಯಿ ಕಪ್ಪುಹಣವನ್ನು ವ್ಯಾಪಾರಿ ಮಹೇಶ್ ಶಾ ಘೋಷಿಸಿಕೊಂಡಿದ್ದರು.