6ನೇ ಹಾರ್ಟ್ ಆಫ್ ಏಷಿಯಾ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಭಯೋತ್ಪಾದಕ ಶಕ್ತಿಗಳ ವಿರುದ್ಧ ಮಾತ್ರವಲ್ಲದೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ, ಹಣದ ಸಹಾಯ ಒದಗಿಸುವವರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಭಯೋತ್ಪಾದನೆ ಮತ್ತು ಬಾಹ್ಯ ಪ್ರೇರಿತ ಅಸ್ಥಿರತೆ ಆಫ್ಘಾನಿಸ್ತಾನಕ್ಕೆ ಕೂಡ ಮಾರಣಾಂತಿಕ ಅಪಾಯವಾಗಿದ್ದು ಅದು ದೇಶದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಮಾರಕವಾಗಿದೆ ಎಂದರು.
ಅಮೃತಸರದಲ್ಲಿ ನಡೆಯುತ್ತಿರುವ 6ನೇ ಹಾರ್ಟ್ ಆಫ್ ಏಷಿಯಾ ಸಚಿವರ ಸಮ್ಮೇಳನ ಆರಂಭಕ್ಕೆ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಭಯೋತ್ಪಾದನೆ ವಿರುದ್ಧ ಭಾರತ ಮತ್ತು ಆಫ್ಘಾನಿಸ್ತಾನದ ನಿಲುವು ಒಂದೇ ಆಗಿದೆ. ಭಯೋತ್ಪಾದಕರ ಕೃತ್ಯಕ್ಕೆ ಆಫ್ಘಾನಿಸ್ತಾನ ಈಗಾಗಲೇ ಸಾಕಷ್ಟು ನಲುಗಿ ಹೋಗಿದ್ದು, ಭಯೋತ್ಪಾದನೆ ವಿರುದ್ಧ ಹೋರಾಡಬೇಕು. ಪೋಷಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಗ ಮಾತ್ರವೇ ಭಯೋತ್ಪಾದನೆ ಬುಡಸಮೇತ ಕಿತ್ತೊಗೆಯಲು ಸಾಧ್ಯ
ಎಂದು ಹೇಳಿದರು.
ಅಮೃತಸರ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿದ್ದು ಇಲ್ಲಿ ಸಮ್ಮೇಳನ ನಡೆಯುತ್ತಿರುವುದು ಭಾರತ ಶಾಂತಿ, ಸಹಕಾರ, ಸೌಹಾರ್ದತೆಯನ್ನು ಬಯಸುತ್ತದೆ ಎಂಬುದನ್ನು ಸಾರುತ್ತದೆ ಎಂದರು.
ಸಮ್ಮೇಳದನದಲ್ಲಿ 40 ದೇಶಗಳ ಪ್ರತಿನಿಧಿಗಳು, 16 ರಾಷ್ಟ್ರಗಳ ಹಿರಿಯ ಅಧಿಕಾರಿಗಳು ಮತ್ತು ಯುರೋಪಿಯನ್ ಯೂನಿಯನ್ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಆಫ್ಘಾನಿಸ್ತಾನಕ್ಕೆ ಕೇವಲ ಬಾಯಿಮಾತಿನ ನೆರವು ನೀಡಿದರೆ ಸಾಲದು. ಇದರ ವಿರುದ್ಧ ಕ್ರಾಂತಿಕಾರಿ ಕ್ರಮ ತೆಗೆದುಕೊಳ್ಳಬೇಕು. ಆಫ್ಘಾನಿಸ್ತಾನದ ಸೋದರ, ಸೋದರಿಯರಿಗೆ ಸಂಪೂರ್ಣ ಮತ್ತು ದೃಢ ನೆರವು ನೀಡಲು ಭಾರತ ಬದ್ಧವಾಗಿದೆ ಎಂದರು.
ಅಫ್ಘಾನಿಸ್ತಾನ ಮತ್ತು ಅದರ ಸುತ್ತಮುತ್ತಲಿನ ದೇಶಗಳೊಂದಿಗೆ ಧನಾತ್ಮಕ ಸಂಪರ್ಕ ಸಾಧಿಸಲು ನಾವು ಕಾರ್ಯಪ್ರವೃತ್ತವಾಗಬೇಕಿದೆ. ಆಫ್ಘಾನಿಸ್ತಾನದವನ್ನು ಭಾರತದೊಂದಿಗೆ ಸಂಪರ್ಕಿಸಲು ವಾಯು ಸಾರಿಗೆ ಕಾರಿಡಾರ್ ನಿರ್ಮಿಸುವ ಯೋಜನೆಯಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಎರಡೂ ದೇಶಗಳ ಮುಖ್ಯಸ್ಥರು ವ್ಯಾಪಾರ ವೃದ್ಧಿ, ಹೂಡಿಕೆ. ಯುದ್ಧ ಪೀಡಿತ ದೇಶಗಳಲ್ಲಿ ಭಾರತದ ಪುನರ್ ನಿರ್ಮಾಣ ಚಟುವಟಿಕೆಗಳು, ರಕ್ಷಣೆ ಮತ್ತು ಭದ್ರತೆ ಸಹಭಾಗಿತ್ವಗಳನ್ನು ಬಲಪಡಿಸುವ ಕುರಿತು ಮಾತುಕತೆ ನಡೆಸಿದರು.
ಪಾಕಿಸ್ತಾನ ತನ್ನ ಪ್ರದೇಶದಲ್ಲಿ ವಾಯುಸಾರಿಗೆ ಸಂಪರ್ಕವನ್ನು ಆಫ್ಘಾನಿಸ್ತಾನಕ್ಕೆ ನೀಡಲು ನಿರಾಕರಿಸಿರುವಾಗ ಭಾರತ ನೀಡಲು ಮುಂದಾಗಿದ್ದು, ಈ ಕುರಿತು ಮಾತುಕತೆ ನಡೆಸಿದರು.
ಆಫ್ಘಾನಿಸ್ತಾನ ಭಾರತದಿಂದ ಮಿಲಿಟರಿ ಹಾರ್ಡ್ ವೇರ್ ಉಪಕರಣಗಳನ್ನು ಕೂಡ ಖರೀದಿಸಲಿದೆ.