ರಕ್ಷಣಾ ಸಚಿವ, ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್
ಪಣಜಿ: ಅಭಿವೃದ್ಧಿ ಯೋಜನೆಗಳನ್ನು ಪರಿಸರ ಹಾನಿಯ ಕಾರಣಗಳನ್ನು ನೀಡಿ ವಿರೋಧಿಸುವವರು ಕಾರಿಗೆ ಬದಲಾಗಿ ಸೈಕಲ್ ಬಳಸಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಗೋವಾದ ಬಿಚೊಲಿಮ್ ನಲ್ಲಿ ನಿನ್ನೆ ನಡೆದ ಪಕ್ಷದ ರ್ಯಾಲಿ ವಿಜಯ್ ಸಂಕಲ್ಪದಲ್ಲಿ ಮಾತನಾಡಿದ ಅವರು, ಮುಂದುವರಿದು ಮಾತನಾಡಿದರು. ಗೋವಾದಲ್ಲಿ ಮಾಂಡೊವಿ ನದಿಗೆ ಮೂರನೇ ಸೇತುವೆ ನಿರ್ಮಾಣಕ್ಕೆ ಅನುಮತಿ ಸಿಗಲು ಕೋರ್ಟ್ ಗೆ ಮೊರೆ ಹೋಗಬೇಕಾಗಿ ಬಂತು. ಸಾಲಿಗಾವೊದಲ್ಲಿ ಕಸ ಸಂಸ್ಕರಣ ಘಟಕ ನಿರ್ಮಾಣಕ್ಕೆ ಕೂಡ ಭಾರೀ ವಿರೋಧ ಕೇಳಿಬಂತು. ಪ್ರತಿಯೊಂದು ಪರಿಸರಕ್ಕೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳನ್ನು ಮಾಧ್ಯಮ ಮತ್ತು ಸಾರ್ವಜನಿಕ ಪ್ರತಿಭಟನೆಗಳ ಮೂಲಕ ವಿರೋಧಿಸಲಾಗುತ್ತಿದೆ. ಜುವಾರಿ ನದಿಗೆ ಅಡ್ಡಲಾಗಿ ಕಟ್ಟುವ ಎರಡನೇ ಸೇತುವೆಗೆ ಕೂಡ ಜನರು ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ. ಸೇತುವೆ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆಯೇ ಭೂಮಿ ಪಡೆಯಲಾಗಿತ್ತು ಎಂದರು.
ಪ್ರಕೃತಿಯನ್ನು ನಾಶ ಮಾಡಬೇಡಿ ಎನ್ನುವವರು ಕಾರನ್ನು ಖರೀದಿಸಬಾರದು, ಸೈಕಲ್ ನಲ್ಲಿ ಓಡಾಡಬೇಕು. ಆಗ ಸಹಜವಾಗಿ ಪರಿಸರ ಸಂರಕ್ಷಣೆಯಾಗುತ್ತದೆ. ಸ್ವೀಡನ್ ನಲ್ಲಿ ಹೀಗೆ ಮಾಡುತ್ತಾರೆ. ಸ್ವೀಡನ್ ದೇಶದ ಪ್ರಧಾನಿ ಕೂಡ ಸೈಕಲ್ ನಲ್ಲಿ ಓಡಾಡುತ್ತಾರೆ. ಭಾರತದಲ್ಲಿ ನಾವು ಕೂಡ ಸೈಕಲ್ ನ್ನು ಬಳಸಿ ಪರಿಸರ ಕಾಪಾಡಬೇಕೆಂದು ಪರಿಕ್ಕರ್ ಹೇಳಿದರು.
ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.