ದೇಶ

ಇಂದು ಸಂಜೆ ಮುಖ್ಯಮಂತ್ರಿ ಜಯಲಲಿತಾ ಅಂತ್ಯಸಂಸ್ಕಾರ, ಏಳು ದಿನಗಳ ಶೋಕಾಚರಣೆ

Sumana Upadhyaya
ನವದೆಹಲಿ/ಚೆನ್ನೈ: ಭಾರತ ದೇಶ ಕಂಡ ಅತ್ಯಂತ ಪ್ರಭಾವಶಾಲಿ  ಮತ್ತು ಜನಪ್ರಿಯ ರಾಜಕಾರಣಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅಂತ್ಯಕ್ರಿಯೆ ಮಂಗಳವಾರ ಸಂಜೆ 4 ಗಂಟೆ ನಂತರ ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆಯಲಿದೆ. 
68 ವರ್ಷದ ಜಯಲಲಿತಾ ನಿನ್ನೆ ರಾತ್ರಿ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಕಳೆಬರವನ್ನು ಪೊಸ್ ಗಾರ್ಡನ್ ಹೋಮ್ ಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿಂದ ಇಂದು ಬೆಳಗ್ಗೆ ರಾಜಾಜಿ ಹಾಲ್ ಗೆ ಕೊಂಡೊಯ್ಯಲಾಯಿತು. 
ರಾಷ್ಟ್ರಧ್ವಜದಿಂದ ಸುತ್ತಿ ದೇಹವನ್ನು ರಾಜಾಜಿ ಹಾಲ್ ಗೆ ಕೊಂಡೊಯ್ಯಲಾಗಿದ್ದು ಅಲ್ಲಿ ಇದೀಗ ಸಾವಿರಾರು ಅವರ ಅಭಿಮಾನಿಗಳು ಅಂತಿಮ ದರ್ಶನಕ್ಕಾಗಿ ಸಾಗುತ್ತಿದ್ದಾರೆ. 
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚೆನ್ನೈಗೆ ಭೇಟಿ ನೀಡಲಿದ್ದಾರೆ.
ತಮ್ಮ ನೆಚ್ಚಿನ ನಾಯಕಿಯನ್ನು ಕಳೆದುಕೊಂಡ ದುಃಖದಲ್ಲಿ ತಮಿಳುನಾಡಿನ ಸಹಸ್ರಾರು ಜನರು ಅಮ್ಮಾ, ಅಮ್ಮಾ ಎಂದು ಕೂಗುತ್ತಾ ಅವರ ನಿವಾಸದ ಹೊರಗೆ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಜಯಲಲಿತಾ ಅವರ ನಿವಾಸದ ಎದುರು ಬ್ಯಾರಿಕೇಡ್ ಗಳನ್ನು ಮುರಿದು ಬೆಂಬಲಿಗರು ಒಳನುಗ್ಗಲು ಪ್ರಯತ್ನಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ದಂಡ ಪ್ರಯೋಗಿಸಬೇಕಾಗಿ ಬಂತು.
ಏಳು ದಿನಗಳ ಶೋಕಾಚರಣೆ: ಮುಖ್ಯಮಂತ್ರಿ ಜಯಲಲಿತಾ ಅವರ ನಿಧನಕ್ಕೆ ತಮಿಳುನಾಡಿನಲ್ಲಿ ಇಂದಿನಿಂದ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಶಾಲಾ-ಕಾಲೇಜುಗಳನ್ನು ಮೂರು ದಿನಗಳವರೆಗೆ ರಜೆ ಘೋಷಿಸಲಾಗಿದೆ.
SCROLL FOR NEXT