ದೇಶ

ಪ್ರಧಾನಿಯನ್ನು ಬೆಂಬಲಿಸಿದ್ದ ಚಾಯ್ ವಾಲನ ಅಂಗಡಿಯಲ್ಲಿ ಸಂಪೂರ್ಣ ನಗದು ರಹಿತ ವಹಿವಾಟು!

Srinivas Rao BV
ವಡೋದರಾ: ಪ್ರಧಾನಿ ನರೇಂದ್ರ ಮೋದಿ ಅವರ ನಗದು ರಹಿತ ವಹಿವಾಟು ಯೋಜನೆಯನ್ನು ಅಳವಡಿಸಿಕೊಳ್ಳಲು ಗುಜರಾತ್ ನ ಚಾಯ್ ವಾಲನೊಬ್ಬ ಮುಂದಾಗಿದ್ದಾನೆ. ಟೀ ಅಂಗಡಿ ನಡೆಸುತ್ತಿರುವ ವಡೋದರಾದ ಕಿರಣ್ ಮಹಿದಾ ಅಂಗಡಿಯಲ್ಲಿ ನಗದು ರಹಿತ ವಹಿವಾಟು ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ವ್ಯಕ್ತಿ. 
2014 ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಉಮೇದುವಾರಿಕೆಗೆ ಸಹಿ ಹಾಕಿದ್ದ ಕಿರಣ್ ಮಹಿದಾ, ತಮ್ಮ ಅಂಗಡಿಯಲ್ಲಿ ಶೀಘ್ರವೇ ಸ್ವೈಪಿಂಗ್ ಮಷಿನ್ ಅಳವಡಿಸಲಿದ್ದಾರೆ. ಕಿರಣ್ ಅವರ ಟೀ ಅಂಗಡಿಗೆ ನಿರಂತರವಾಗಿ ಭೇಟಿ ನೀಡುವ ಗ್ರಾಹಕರು ತಿಂಗಳಿಗೊಮ್ಮೆ ಬಿಲ್ ಪಾವತಿ ಮಾಡುತ್ತಾರೆ. ಇಡೀ ತಿಂಗಳ ಬಿಲ್ ನ್ನು ಒಮ್ಮೆಲೆ ಪಾವತಿ ಮಾಡುವ ಗ್ರಾಹಕರಿಗೆ ನೆರವಾಗಲು ನಗದು ರಹಿತ ವಹಿವಾಟು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಾಗಿ ಕಿರಣ್ ತಿಳಿಸಿದ್ದಾರೆ. 
500, 1000 ರೂ ಮುಖಬೆಲೆಯ ನೋಟು ನಿಷೇಧವಾಗುವವರೆಗೂ ನಾನು ನಗದನ್ನೇ ಸ್ವೀಕರಿಸುತ್ತಿದ್ದೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ನನ್ನ ಅಂಗಡಿಯಲ್ಲಿ ನಗದು ರಹಿತ ವ್ಯವಸ್ಥೆ ಜಾರಿಗೆ ಬರಲಿದೆ, ಇದೇ ಉತ್ತಮ ವ್ಯವಸ್ಥೆ ಎನ್ನುತ್ತಾರೆ ಕಿರಣ್. ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರುವ ಚಾಯ್ ವಾಲನಿಗೆ ಜಿಪಿಆರ್ ಎಸ್ ಸ್ವೈಪ್ ಮಷಿನ್ ದೊರೆಯಲಿದ್ದು, ಈಗಾಗಲೇ ಪೇಟಿಎಂ ಮೂಲಕವೂ ಗ್ರಾಹಕರಿಂದ ಹಣ ಪಡೆಯುತ್ತಿದ್ದಾರೆ. 
2014 ರ ಲೋಕಸಭಾ ಚುನಾವಣೆಗೆ ವಡೋದರಾ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಉಮೇದುವಾರಿಕೆ ಸಲ್ಲಿಸುವ ವೇಳೆ ವಡೋದರಾ ಕ್ಷೇತ್ರದ ಕಿರಣ್ ಮಹಿದಾ ಅವರಿಂದ ಸಹಿ ಪಡೆದುಕೊಂಡಿದ್ದರು. ಇದನ್ನು ಸ್ಮರಿಸಿರುವ ಕಿರಣ್, ಪ್ರಧಾನಿ ನರೇಂದ್ರ ಮೋದಿ ತಮ್ಮ ಉಮೇದುವಾರಿಕೆ ಪರವಾಗಿ ಸಾಮಾನ್ಯ ಚಾಯ್ ಮಾರಾಟಗಾರನಾಗಿದ್ದ ನನ್ನ ಹಾಗೂ ಅತ್ಯಂತ ಶ್ರೀಮಂತ ರಾಜರ ಕುಟುಂಬದವರಾಗಿದ್ದ ಶುಭಾಂಗಿನಿರಾಜೆ ಗಾಯೆಕ್ ವಾಡ್ ಅವರ ಸಹಿಯನ್ನು ಪಡೆದುಕೊಂಡಿದ್ದರು. ಈಗ ನೋಟು ನಿಷೇಧ ಮಾಡುವ ಮೂಲಕ ಶ್ರೀಮಂತ, ಬಡವರ ನಡುವೆ ಸಮಾನತೆ ಇರುವುದನ್ನು ಸಾಧ್ಯಗೊಳಿಸಲು ಯತ್ನಿಸಿದ್ದಾರೆ, ಇದೊಂದು ಅತ್ಯುತ್ತಮವಾದ ಕ್ರಮ ಎಂದು ಕಿರಣ್ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
SCROLL FOR NEXT