ನೋಟು ನಿಷೇಧದ ಬಗ್ಗೆ ಮತ್ತೆ ಸಂಸತ್ ನಲ್ಲಿ ಗದ್ದಲ
ನವದೆಹಲಿ: ಡಿ.7 ರಂದು ಪ್ರಾರಂಭವಾದ ಸಂಸತ್ ಅಧಿವೇಶನದ ಕಲಾಪದಲ್ಲಿ ನೋಟು ನಿಷೇಧದ ವಿಚಾರವಾಗಿ ಮತ್ತೆ ಗದ್ದಲ ಉಂಟಾಗಿದ್ದು, ಉಭಯ ಸದನಗಳಲ್ಲೂ ವಿಪಕ್ಷಗಳು ಪ್ರಧಾನಿ ಕ್ಷಮೆಗೆ ಪಟ್ಟು ಹಿಡಿದ ಘಟನೆ ನಡೆದಿದೆ.
ಪ್ರಶ್ನೋತ್ತರ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ನೋಟು ನಿಷೇಧದ ಬಗ್ಗೆ ಪ್ರತಿಪಕ್ಷಗಳ ಸದಸ್ಯರು ಚರ್ಚೆ ನಡೆಸಲು ಆಗ್ರಹಿಸಿದರು. ಗದ್ದಲದ ನಡುವೆಯೇ ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಶ್ನೋತ್ತರ ಕಲಾಪವನ್ನು ನಡೆಸಲು ಯತ್ನಿಸಿದರಾದರೂ ಪ್ರತಿಪಕ್ಷಗಳ ಗದ್ದಲ ಹೆಚ್ಚಿದರಿಂದ ಅಸಮಾಧಾನಗೊಂಡ ಸ್ಪೀಕರ್ ಸುಮಿತ್ರ ಮಹಾಜನ್ ಪ್ರತಿದಿನವೂ ಇದೇ ರೀತಿ ಗದ್ದಲ ಮಾಡುತ್ತೀರಿ, ಚರ್ಚೆ ನಡೆಸುವುದೇ ನಿಮ್ಮ ಉದ್ದೇಶವಾದರೆ ಈ ಕ್ಷಣವೇ ಚರ್ಚೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದರು.
ಸ್ಪೀಕರ್ ಅವರ ಮನವಿಯ ಹೊರತಾಗಿಯೂ ಗದ್ದಲವನ್ನು ಮುಂದುವರೆಸಿದ ಪ್ರತಿಪಕ್ಷಗಳ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸುಮಿತ್ರಾ ಮಹಾಜನ್ ಕಲಾಪವನ್ನು ಕೆಲಕಾಲ ಮುಂದೂಡಿದರು.
ರಾಜ್ಯಸಭೆಯಲ್ಲೂ ಸಹ ಪ್ರತಿಪಕ್ಷಗಳು ಗದ್ದಲ ಉಂಟುಮಾಡಿದ್ದು, ನೋಟು ನಿಷೇಧದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್, ಕೇಂದ್ರ ಸರ್ಕಾರ ನೋಟು ನಿಷೆಧದ ನಿರ್ಧಾರ ಪ್ರಕಟಿಸಿದ ದಿನದಿಂದ ಈ ವರೆಗೂ 80 ಜನರು ಮೃತಪಟ್ಟಿದ್ದಾರೆ. ಈ ಸಾವುಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಯಾವುದೇ ಸಿದ್ಧತೆ ಇಲ್ಲದೇ ನೋಟು ನಿಷೇಧದ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಗುಲಾಂ ನಬಿ ಆಜಾದ್ ಆರೋಪಿಸಿದ್ದರೆ, ನೋಟು ನಿಷೇಧದ ಸಮಸ್ಯೆಯಿಂದ ಉಂಟಾದ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಜನತೆಯ ಬಳಿ 50 ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ ಈ ವರೆಗೂ ಪರಿಸ್ಥಿತಿ ಸುಧಾರಣೆಯಾಗಿಲ್ಲ, ಆದ್ದರಿಂದ ಪ್ರಧಾನಿ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics