ದೇಶ

ಜಯಲಲಿತಾ ಆರೋಗ್ಯದ ಮಾಹಿತಿ ಗೌಪ್ಯವಾಗಿಟ್ಟಿದ್ದೇಕೆ? ತನಿಖೆ ನಡೆಸಲು ಪ್ರಧಾನಿ ಮೋದಿಗೆ ನಟಿ ಗೌತಮಿ ಮನವಿ

Shilpa D

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು 75 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು, ಆದರೆ ಈ 75 ದಿನಗಳಲ್ಲಿ ಅವರ ಆರೋಗ್ಯದ ಬಗೆಗಿನ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ರಹಸ್ಯವಾಗಿ ಇಡಲಾಗಿದೆ. ಆರೋಗ್ಯದ ಬಗ್ಗೆಗಿನ ವಿವರವನ್ನು ಏಕೆ ಎಲ್ಲಿಯೂ ಬಹಿರಂಗ ಪಡಿಸಿಲ್ಲಸ, ಆಸ್ಪತ್ರೆಯೊಳಗೆ ಏನಾಗುತ್ತಿದೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ ಏಕೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿರುವ ನಟಿ ಗೌತಮಿ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ತನಿಖೆಗೆ ಆದೇಶಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಅಕ್ಟೋಬರ್ 28 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟಿ ಗೌತಮಿ ಭೇಟಿ ಮಾಡಿದ್ದರು. ಅದಕ್ಕೂ ಮೂರು ದಿನ ಮೊದಲು ತಮ್ಮ ಲಿವಿಂಗ್ ಪಾರ್ಟನರ್ ಕಮಲ್ ಹಾಸನ್ ರಿಂದ ಬೇರ್ಪಟ್ಟ ವಿಷಯವನ್ನು ತಮ್ಮ ಬ್ಲಾಗ್ ನಲ್ಲಿ ಬರೆದು ಕೊಂಡಿದ್ದರು.

ಈ ಬಾರಿ ತಮ್ಮ ಟ್ವಿಟ್ಟರ್ ನಲ್ಲಿ ಜಯಲಲಿತಾ ಆರೋಗ್ಯದ ರಹಸ್ಯದ ಮಾಹಿತಿ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಜ್ವರ ಹಾಗೂ ನಿರ್ಜಲೀಕರಣ ಸಮಸ್ಯೆಯಿಂದಾಗಿ ಸೆಪ್ಟಂಬರ್ 22 ರಂದು ಜಯಲಲಿತಾ ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಆಸ್ಪತ್ರೆಗೆ ದಾಖಲಾದ ನಂತರ ಅವರ ಆರೋಗ್ಯದ ಬಗೆಗಿನ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿರಲಿಲ್ಲ. ಅಪೋಲೋ ಆಸ್ಪತ್ರೆ ಮೆಡಿಕಲ್ ಬುಲೆಟಿನ್ ಆಗಾಗ್ಗೆ ಜಯ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿತ್ತು. ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದಾರೆ, ಎಲ್ಲಾ ರೀತಿಯ ಚಿಕಿತ್ಸೆಗೂ ಸ್ಪಂದಿಸುತ್ತಿದ್ದಾರೆ ಎಂದು ಹೇಳುತ್ತಿತ್ತು, ಆದರೆ ಡಿಸೆಂಬರ್ 4 ರ ರಾತ್ರಿ  ಜಯಲಲಿತಾ ಅವರಿಗೆ ಹೃದಯ ಸ್ತಂಬನವಾಗಿದೆ ಎಂದು ಹೇಳಿತ್ತು, ಅದಾದ ನಂತರ ಡಿಸೆಂಬರ್ 5 ರಂದು ಜಯ ನಿಧನರಾಗಿದ್ದಾರೆ ಎಂದು ಘೋಷಿಸಿತು.

SCROLL FOR NEXT