ರಾಯ್ ಪುರ: ಟಮೊಟೋ ಬೆಲೆ ಕುಸಿತದಿಂದಾಗಿ ಆಕ್ರೋಶಗೊಂಡ ರೈತರು ತಾವು ತಂದಿದ್ದ ಟಮೋಟೋವನ್ನು ರಾಷ್ಟ್ರೀಯ ಹೆದ್ದಾರಿಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಛತ್ತೀಸ್ ಗಡದಲ್ಲಿ ಪ್ರತಿ ಕೆಜಿ ಟಮೋಟೋ ಬೆಲೆ 25 ಪೈಸೆಗೆ ಕುಸಿದ ಕಾರಣ ಆಕ್ರೋಶ ಗೊಂಡು ರೈತರು ಸುಮಾರು 100 ಟ್ರ್ಯಾಕ್ಟರ್ ಟಮೋಟೋವನ್ನು ರಾಷ್ಟ್ರೀಯ ಹೆದ್ದಾರಿಗೆ ಸುರಿದು ಸಂಚಾರ ತಡೆದು ಪ್ರತಿಭಟಿಸಿದ್ದಾರೆ.
ರೈತರ ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 4 ಗಂಟೆಗಳ ಕಾಲ ಸಂಚಾರ ಬಂದ್ ಆಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು, ನಂತರ ಜಿಲ್ಲಾಡಳಿತ ಉತ್ತಮ ಬೆಲೆ ಕೊಡಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಸ್ ತೆಗೆದುಕೊಳ್ಳಲಾಯಿತು.
ದೊಡ್ಡ ದೊಡ್ಡ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ನೋಟು ನಿಷೇಧದ ಲಾಭ ಪಡೆದು ರೈತರನ್ನು ಸಂಕಷ್ಠಕ್ಕೆ ಸಿಲುಕಿಸುತ್ತಿದ್ದಾರೆ ಎಂದರು ರೈತರು ಆರೋಪಿಸಿದ್ದಾರೆ.
ನೋಟು ನಿಷೇಧದಿಂದಾಗಿ ಈ ಸಮಸ್ಯೆ ಉಂಟಾಗಿಲ್ಲ, ಈ ಬಾರಿ ರೈತರು ಅಧಿಕ ಪ್ರಮಾಣದಲ್ಲಿ ಟಮೊಟೊ ಬೆಳೆದಿದ್ದಾರೆ. ಹೀಗಾಗಿ ದರ ಕುಸಿದಿದೆ. ನಾವು ವ್ಯಾಪಾರಿಗಳು, ರೈತರು ಹಾಗೂ ಕೃಷಿ ತಜ್ಞರ ಜೊತೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.