ನವದೆಹಲಿ: ಕಾಳಧನಿಕರ ವಿರುದ್ಧ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮುಂದುವರೆಸಿದ್ದು, ಬುಧವಾರ ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬೆಂಗಳೂರು, ಪಣಜಿ, ಫರಿದಾಬಾದ್ ನಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಬೆಂಗಳೂರಿನಲ್ಲಿ 2.25 ಕೋಟಿ ನಗದು, ಪಣಜಿಯಲ್ಲಿ 68 ಲಕ್ಷ ಹಾಗೂ ಫರಿದಾಬಾದ್ ನಲ್ಲಿ 25 ಲಕ್ಷ ರು. ಮೌಲ್ಯದ ಹೊಸನೋಟುಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು 3.18 ಕೋಟಿ ಮೌಲ್ಯದ ಅಕ್ರಮ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಅಧಿಕಾರಿಗಳು ಒಟ್ಟು ನಾಲ್ಕು ಮಂದಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆಯಷ್ಟೇ ದೆಹಲಿಯ ಕರೋಲ್ ಬಾಗ್ ನಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು 3.25 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಮುಂಬೈ ಮೂಲದ ಹವಾಲಾ ದಲ್ಲಾಳಿಯೊಬ್ಬನಿಗೆ ಸೇರಿದ ಹಣವನ್ನು ಕರೋಲ್ ಬಾಗ್ ನಲ್ಲಿ ಐವರು ಶೇಖರಿಸಿಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದರು.