ದೇಶ

ನೋಯ್ಡಾ ಎಕ್ಸಿಸ್ ಬ್ಯಾಂಕ್ ಮೇಲೆ ಐಟಿ ದಾಳಿ; 20 ನಕಲಿ ಖಾತೆಗಳಲ್ಲಿದ್ದ 60 ಕೋಟಿ ರು. ಹಣ ಪತ್ತೆ!

Srinivasamurthy VN

ನೋಯ್ಡಾ: ನೋಟು ನಿಷೇಧ ಬಳಿಕ ಕಾಳಧನಿಕರ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಅಧಿಕಾರಿಗಳು ನಿರಂತರ ದಾಳಿಯಲ್ಲಿ ತಲ್ಲೀನರಾಗಿದ್ದು, ಬುಧವಾರ ತಡರಾತ್ರಿಯಲ್ಲಿ ನೋಯ್ಡಾದ ಎಕ್ಸಿಸ್ ಬ್ಯಾಂಕ್ ಮೇಲೆ ದಾಳಿ ನಡೆಸಿ 20  ನಕಲಿ ಖಾತೆಗಳಲ್ಲಿದ್ದ ಸುಮಾರು ಕೋಟಿ ರು.ಗಳನ್ನು ಪತ್ತೆ ಮಾಡಿದ್ದಾರೆ.

ಮೂಲಗಳ ಪ್ರಕಾರ ಈ ಎಲ್ಲ 20 ನಕಲಿ ಖಾತೆಗಳನ್ನು ಬಡ ಕೂಲಿ ಕಾರ್ಮಿಕರ ಹೆಸರಲ್ಲಿ ಸೃಷ್ಟಿ ಮಾಡಲಾಗಿದ್ದು, ಕಾಳಧನಿಕರ ಕಪ್ಪುಹಣವನ್ನು ಈ ಖಾತೆಗಳಲ್ಲಿ ನಿಯಮಿತವಾಗಿ ಜಮಾ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.  ಪ್ರಸ್ತುತ ಬ್ಯಾಂಕ್ ಅನ್ನು ಸುತ್ತುವರೆದಿರುವ ಆದಾಯತೆರಿಗೆ ಅಧಿಕಾರಿಗಳು ಬ್ಯಾಂಕ್ ನಲ್ಲಿ ತೀವ್ರ ಶೋಧ ನಡೆಸುತ್ತಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಆಭರಣ ಅಂಗಡಿ ಮಾಲೀಕನೋರ್ವ ತನ್ನ ಬಳಿ ಇದ್ದ ಆಭರಣಗಳನ್ನು 600 ಕೋಟಿ ರು.ಗೆ ಮಾರಿ ಆ ಹಣವನ್ನು ಠೇವಣಿ ಮಾಡಿರುವುದಾಗಿ ಹೇಳಿಕೊಂಡಿದ್ದರು. ಇದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದು ಇದೀಗ  ಅಧಿಕಾರಿಗಳು ನೋಯ್ಡಾ ಎಕ್ಸಿಸ್ ಬ್ಯಾಂಕ್ ಶಾಖೆ ಮೇಲೆ ದಾಳಿ ನಡೆಸಿದ್ದಾರೆ.

ಇತ್ತೀಚೆಗಷ್ಟೇ ದೆಹಲಿಯ ಚಾಂದಿನಿ ಚೌಕ್ ನಲ್ಲಿರುವ ಎಕ್ಸಿಸ್ ಬ್ಯಾಂಕ್ ನಲ್ಲಿ ಒಟ್ಟು 44 ನಕಲಿ ಖಾತೆಗಳಲ್ಲಿ ದಾಖಲೆಗಳಿಲ್ಲದ ಸುಮಾರು 100 ಕೋಟಿ ರು.ಹಣ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸಿಸ್ ಬ್ಯಾಂಕ್ ತನ್ನ  16 ಸಿಬ್ಬಂದಿಗಳನ್ನು ಅಮಾನತು ಮಾಡಿತ್ತು. ಅಂತೆಯೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಕೂಡ ಇಬ್ಬರು ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿದ್ದರು. ಇನ್ನು ಖಾಸಗಿ ಬ್ಯಾಂಕುಗಳಲ್ಲಿನ ಅಕ್ರಮ ಕುರಿತಂತೆ ಕೇಂದ್ರ ಸರ್ಕಾರ  ಈ ಹಿಂದೆಯೂ ಆಕ್ಸಿಸ್ ಬ್ಯಾಂಕ್ ಗೆ ಕೆಲ ಸೂಚನೆಗಳನ್ನು ನೀಡಿತ್ತು. ಆದರೆ ಈ ಸುದ್ದಿಯನ್ನು ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ್ದರು.

SCROLL FOR NEXT