ನವದೆಹಲಿ: ಜನ್ಮದಿನ ಸಂಭ್ರಮಾಚರಣೆಗೆ ಕರೆದು ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತ ಬಾಲಕರಿಬ್ಬರು ಸಾಮೂಹಿಕ ಅತ್ಯಾಚಾರ ಗೈದಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ದೆಹಲಿ ಉತ್ತಮ ನಗರದಲ್ಲಿ ಈ ಘಟನೆ ನಡೆದಿದ್ದು, ಆಪ್ರಾಪ್ತ ಬಾಲಕರಿಬ್ಬರು 13 ವರ್ಷದ ತಮ್ಮ ಸ್ನೇಹಿತೆಯನ್ನೇ ಸಾಮೂಹಿಕವಾಗಿ ಅತ್ಯಾಚಾರ ಗೈದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಡಿಸೆಂಬರ್ 13ರಂದು ಬಾಲಕಿಯನ್ನು ಜನ್ಮ ದಿನಾಚರಣೆಗೆಂದು ಬಾಲಕರು ಆಹ್ವಾನಿಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಬಾಲಕಿಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ನೀಡಲಾಗಿದೆ. ಅದನ್ನು ಸೇವಿಸಿದ ಬಾಲಕ ಪ್ರಜ್ಞೆ ತಪ್ಪಿದ್ದು, ಆಕೆಯನ್ನು ಕೊಠಡಿಗೆ ಹೊತ್ತೊಯ್ದ ಬಾಲಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿದ್ದಾರೆ.
ಬಳಿಕ ಆಕೆಯನ್ನು ದುಷ್ಕರ್ಮಿಗಳು ಪಶ್ಚಿಮ ದೆಹಲಿಯ ಆಸ್ಪತ್ರೆ ಬಳಿ ಎಸೆದು ಹೋಗಿದ್ದಾರೆ. ಬೆಳಗ್ಗೆ ಸುಮಾರು 3 ಗಂಟೆ ಹೊತ್ತಿನಲ್ಲಿ ಇದನ್ನು ಗಮನಿಸಿದ ದಾರಿಹೋಕರು ವಿವಸ್ತ್ರಗೊಂಡಿದ್ದ ಬಾಲಕಿಯನ್ನು ಎಬ್ಬಿಸಿದ್ದಾರೆ. ಅಲ್ಲದೆ ಆಕೆ ಮನೆಗೆ ವಾಪಸಾಗಲು ನೆರವು ನೀಡಿದ್ದಾರೆ. ಮನೆಗೆ ವಾಪಸ್ ತೆರಳಿದ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷಕರು ಈ ಬಗ್ಗೆ ಉತ್ತಮ ನಗರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಐಪಿಸಿ ಸೆಕ್ಷನ್ 376-ಡಿ (ಸಾಮೂಹಿಕ ಅತ್ಯಾಚಾರ) ಹಾಗೂ ಪೋಸ್ಕೋ (ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ)ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಅಂತೆಯೇ ಕಾರ್ಯಾಚರಣೆ ನಡೆಸಿದ ಪೊಲೀಸರು 17 ವರ್ಷದ ಅಪ್ರಾಪ್ತ ಬಾಲಕ ಹಾಗೂ 18 ವರ್ಷದ ಯುವಕ ಸಾಹಿಲ್ ಎಂಬುವವರನ್ನು ಬಂಧಿಸಿದ್ದಾರೆ.