ನವದೆಹಲಿ: ಭಾರತೀಯ ಸೇನೆ ಸಾರ್ವಜನಿಕ ಸಂಸ್ಥೆಯಾಗಿದ್ದು, ಸೇವಾ ಹಿರಿತನವನ್ನು ಹಿಂದಿಕ್ಕಿ ಸೇನಾ ಮುಖ್ಯಸ್ಥರನ್ನು ನೇಮಕ ಮಾಡಿರುವುದರ ಕುರಿತು ದೇಶದ ಜನತೆಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಎಂದು ಕಾಂಗ್ರೆಸ್ ಭಾನುವಾರ ಆಗ್ರಹಿಸಿದೆ.
ಭಾರತೀಯ ಸೇನೆಯ ಮುಖಸ್ಥರ ಆಯ್ಕೆಯಲ್ಲಿ ಸೇವಾ ಹಿರಿತನವನ್ನು ಗಾಳಿಗೆ ತೂರಿರುವ ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರನ್ನು ನೂತನ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಸೇವಾಜೇಷ್ಠತೆಯನ್ನು ಹೊಂದಿದ್ದ ಇಬ್ಬರು ಲೆಫ್ಟಿನೆಂಟ್ ಗವರ್ನರ್ ಗಳನ್ನು ಕಡೆಗಣಿಸಿ ಈ ನೇಮಕ ಮಾಡಿರುವುದಕ್ಕೆ ಕೇಂದ್ರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗತೊಡಗಿವೆ.
ಸೇನಾ ಮುಖ್ಯಸ್ಥರ ಆಯ್ಕೆ ಕುರಿತಂತೆ ಟ್ವಿಟರ್ ನಲ್ಲಿ ಕೇಂದ್ರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಅವರು, ನೂತನ ಮುಖ್ಯಸ್ಥನ ಆಯ್ಕೆ ಕುರಿತು ಯಾವುದೇ ವೈಯಕ್ತಿಕ ದಾಳಿಯನ್ನು ಮಾಡುತ್ತಿಲ್ಲ. ಆದರೆ, ನ್ಯಾಯಯುತವಾದ ಪ್ರಶ್ನೆ ಇದಾಗಿದೆ. ರಾವತ್ ಅವರು ಅತ್ಯಂತ ಅನುಭವವುಳ್ಳ ಹಾಗೂ ಜೇಷ್ಠತೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಅವರ ಮೇಲೆ ವೈಯಕ್ತಿಕ ದಾಳಿಯನ್ನು ಮಾಡುತ್ತಿಲ್ಲ. ಆದರೆ, ಕೇಂದ್ರ ಸರ್ಕಾರ ಸೇವಾ ಹಿರಿತನ ಕಡೆಗಣಿಸಿರುವುದ ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಸ್ಥರ ನೇಮಕದಲ್ಲಿ ಪೂರ್ವ ಕಮಾಂಡ್ ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಪ್ರವೀಣ್ ಬಕ್ಷಿ (ಸಶಸ್ತ್ರ ಪಡೆ) ಹಾಗೂ ದಕ್ಷಿಣ ಸೇನಾ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಪಿ.ಎಂ. ಹ್ಯಾರಿಸ್ (ಯಾಂತ್ರೀಕೃತ ಇನ್ ಫ್ಯಾಂಟ್ರಿ) ಅವರ ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ. ಮುಖ್ಯಸ್ಥರ ಆಯ್ಕೆ ವಿಚಾರ ಸರ್ಕಾರದ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ. ಆದರೂ, ಸಾಮಾನ್ಯವಾಗಿ ಹಿರಿತನದ ಆಧಾರದ ಮೇಲೆ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗುತ್ತದೆ.
ಪ್ರತೀಯೊಂದು ಪರಿಸ್ಥಿತಿ ಹಾಗೂ ಸಮಯದಲ್ಲೂ ಒಂದೊಂದು ಸಂದರ್ಭಗಳಿರುತ್ತವೆ. ಸೇನಾ ಮುಖ್ಯಸ್ಥ ನೇಮಕದಲ್ಲಿ ಮೂವರು ಅಧಿಕಾರಿಗಳನ್ನೇ ಕಡೆಗಣಿಸಲಾಗಿದೆ?...ಅವರ ವಿರುದ್ಧ ಸರ್ಕಾರಕ್ಕೇನಾದರೂ ಹಗೆತನವಿದೆಯೇ?... ಭಾರತೀಯ ಸೇನೆ ಸಾರ್ವಜನಿಕ ಸಂಸ್ಥೆಯಾಗಿದ್ದು, ಅಧಿಕಾರಿಗಳ ಕಡೆಗಣನೆ ಕುರಿತು ದೇಶದ ಜನತೆ ಬಳಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.