ಬಿಜೆಡಿ ಸಂಸದ ಬೈದ್ಯನಾಥ್ ಜಯ್ ಪಾಂಡಾ
ನವದೆಹಲಿ: ಸಂಸತ್ ನಲ್ಲಿ ವ್ಯರ್ಥವಾದ ಸಮಯಕ್ಕೆ ಅನುಗುಣವಾಗಿ ತಮ್ಮ ವೇತನವನ್ನು ಹಿಂತಿರುಗಿಸಲು ಬಿಜೆಡಿ ಸಂಸದ ಬೈದ್ಯನಾಥ್ ಜಯ್ ಪಾಂಡಾ ನಿರ್ಧರಿಸಿದ್ದಾರೆ.
ಬೈದ್ಯನಾಥ್ ಪಾಂಡಾ ವ್ಯರ್ಥವಾದ ಸಂಸತ್ ಕಲಾಪಕ್ಕೆ ಅನುಗುಣವಾಗಿ ವೇತನವನ್ನು ಹಿಂತಿರುಗಿಸುತ್ತಿರುವ ಕೆಲಸವನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತಿದ್ದಾರೆ. ನಾವು ಮಾಡಬೇಕಾಗಿರುವ ಕೆಲಸಗಳನ್ನು ಮಾಡದೇ ಇದ್ದರೆ ನನ್ನ ಆತ್ಮಸಾಕ್ಷಿ ಪ್ರಶ್ನಿಸುತ್ತದೆ. ಆದ್ದರಿಂದ ಕಳೆದ 4-5 ವರ್ಷಗಳಿಂದ ವ್ಯರ್ಥವಾದ ಕಲಾಪಕ್ಕೆ ಅನುಗುಣವಾಗಿ ವೇತವನ್ನೂ ಹಿಂತಿರುಗಿಸುತ್ತಿದ್ದೇನೆ ಎಂದು ಪಾಂಡಾ ತಿಳಿಸಿದ್ದಾರೆ.
ನಾನು ಕಳೆದ 16 ವರ್ಷಗಳಲ್ಲಿ ಸಂಸತ್ ಕಲಾಪಕ್ಕೆ ಒಂದು ದಿನವೂ ಅಡ್ಡಿ ಪಡಿಸಿಲ್ಲ, ಸಂಸತ್ ಕಲಾಪ ವ್ಯರ್ಥವಾದರೆ ಅಪಾರ ಪ್ರಮಾಣದ ಹಣ ಪೋಲಾಗುತ್ತದೆ. ಸಂಸತ್ ಕಲಾಪ ವ್ಯರ್ಥವಾದಾಗ ಪೋಲಾದ ಬೃಹತ್ ಮೊತ್ತದ ಹಣಕ್ಕೆ ಹೋಲಿಸಿದರೆ ನಾನು ಹಿಂತಿರುಗಿಸುತ್ತಿರುವ ವೇತನದ ಹಣ ಅಲ್ಪ ಮೊತ್ತದ್ದು. ಆದರೂ ನನ್ನ ಆತ್ಮಸಾಕ್ಷಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಿದ್ದೇನೆ ಎಂದು ಪಾಂಡಾ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್, ಟಿಎಂಸಿ ಪಕ್ಷಗಳ ನಾಯಕರು ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ವಿರೋಧಿಸಿ ಉಭಯ ಸದನಗಳಲ್ಲೂ ಗದ್ದಲ ಉಂಟು ಮಾಡಿದ್ದರು. ಪರಿಣಾಮ ಸಂಸತ್ ನ ಚಳಿಗಾಲದ ಅಧಿವೇಶನ ಸಂಪೂರ್ಣವಾಗಿ ವ್ಯರ್ಥವಾಗಿದೆ.