ಸಂಬಾಲ್: ಉತ್ತರ ಪ್ರದೇಶದ ಸಂಬಾಲ್ ನ ಮೊರದಾಬಾದ್ ಎಂಬಲ್ಲಿ ಸಂಶಯಾಸ್ಪದ ವ್ಯಕ್ತಿಗಳನ್ನು ಬಂಧಿಸಿದ ಪೊಲೀಸರು 2000 ಹೊಸ ನೋಟಿನ 20 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ರಾತ್ರಿ ಚಂಡೌಸಿ ಪ್ರದೇಶದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರನ್ನು ತಡೆಹಿಡಿದ ಪೊಲೀಸರು ಎರಡು ಬ್ಯಾಗುಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಷ್ಣು ಶ್ರೀವಾಸ್ತವ್ ಮತ್ತು ರಂಜಿತ್ ಕುಮಾರ್ ಎಂಬುವವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಾಗ ಆದಾಯ ತೆರಿಗೆ ಇಲಾಖೆ ತಂಡದ ಅಧಿಕಾರಿಗಳು ಬ್ಯಾಗನ್ನು ತೆರೆದು ನೋಡಿದಾಗ ಅದರಲ್ಲಿ 16 ಲಕ್ಷ 2000ದ ನೋಟುಗಳು ಮತ್ತು 100, 50 ಮತ್ತು 10 ರೂಪಾಯಿಗಳ 4 ಲಕ್ಷ ರೂಪಾಯಿಗಳಿದ್ದವು ಎಂದು ಪೊಲೀಸ್ ವರಿಷ್ಠ ಅಮಿತ್ ಕುಮಾರ್ ತಿಳಿಸಿದ್ದಾರೆ.
ಹಣ ಮೊರದಾಬಾದ್ ನ ಅನ್ಷುಲ್ ಕುಮಾರ್ ಎಂಬುವವರಿಗೆ ಸೇರಿದ್ದಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.