ನವದೆಹಲಿ: ಗೋವಾದ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಬಲಿಪಶು ಮಾಡುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಸಿಎಂ ಅಭ್ಯರ್ಥಿ ಎಲ್ವಿಸ್ ಗೋಮ್ಸ್ ನ ಪ್ರಾಮಾಣಿಕತೆ ಗೋವಾದ ಜನತೆಗೆ ತಿಳಿದಿದೆ, ಆದರೆ ಬಿಜೆಪಿ ಎಲ್ವಿಸ್ ಅವರನ್ನು ಬಲಿಪಶು ಮಾಡುತ್ತಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಹಗರಣವೊಂದರಲ್ಲಿ ಶಾಮೀಲಾಗಿರುವ ಆರೋಪದ ಸಂಬಂಧ ಗೋವಾದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಎಲ್ವಿಸ್ ಗೋಮ್ಸ್ ಅವರಿಗೆ ಸಮನ್ಸ್ ಜಾರಿ ಮಾಡಿದ ಬೆಳವಣಿಗೆ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧ ಆರೋಪ ಮಾಡಿದೆ.
ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಗೋವಾದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಗೋವಾದ ಬಂಧೀಖಾನೆಯ ಮಾಜಿ ಇನ್ಸ್‌ಪೆಕ್ಟರ್ ಜನರಲ್ ಎಲ್ವಿಸ್ ಗೋಮ್ಸ್ ಅವರನ್ನು ಕಳೆದ ವಾರ ಆಮ್ ಆದ್ಮಿ ಪಕ್ಷ ತನ್ನ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಶಿಸಿತ್ತು. ಆಪ್ ಪಕ್ಷದ ಸಿಎಂ ಅಭ್ಯರ್ಥಿ ವಿರುದ್ಧ ಈಗ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.