ಕಾಂಗ್ರೆಸ್ ಸ್ಥಾಪನಾ ದಿನಾಚರಣೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ತಾವು ಒಂದು ಯಜ್ಞ ಮಾಡಲು ನಿರ್ಧರಿಸಿರುವುದಾಗಿ ನವೆಂಬರ್ 8ರಂದು ಪ್ರಧಾನ ಮಂತ್ರಿ ಹೇಳಿದ್ದರು. ಅವರು ಮಾಡುತ್ತಿರುವ ಯಜ್ಞ ಶ್ರೀಮಂತರಿಗಾಗಿ. ನೋಟುಗಳ ಅಮಾನ್ಯತೆ ಯಜ್ಞವನ್ನು ಶೇಕಡಾ 1ರಷ್ಟು ಅತಿ ಶ್ರೀಮಂತ ವ್ಯಕ್ತಿಗಳಿಗಾಗಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಇಂದು ದೆಹಲಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 132ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿ ಯಜ್ಞದಲ್ಲಿಯೂ ಯಾವುದಾದರೊಂದು ಪ್ರಾಣಿ ಅಥವಾ ವಸ್ತುವನ್ನು ಬಲಿ ಕೊಡುವುದು ಸಂಪ್ರದಾಯ ಮತ್ತು ಪದ್ಧತಿ. ಹಾಗೆಯೇ ಮೋದಿಯವರು ಈ ಯಜ್ಞದಲ್ಲಿ ದೇಶದ ಸಾಮಾನ್ಯ ಜನರನ್ನು ಬಲಿ ಕೊಡುತ್ತಿದ್ದಾರೆ ಎಂದರು.
ನೋಟುಗಳ ಅಮಾನ್ಯತೆ ಎಂಬ ಯಜ್ಞ ಶ್ರೀಮಂತರಿಗೆ ಸಹಾಯವಾಗಲು ಮಾಡುವಂತದ್ದು ಎಂದರು. ಕಾಂಗ್ರೆಸ್ ಎಂದರೇನು? ಅದರ ಅರ್ಥ ನಿಮ್ಮ ಮಾತುಗಳನ್ನು ಕೇಳುವುದು, ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವುದು. ಇದು ನಮಗೆ ಸ್ವಾತಂತ್ರ್ಯದ ಅರ್ಥವನ್ನು ಗೊತ್ತುಪಡಿಸುತ್ತದೆ ಎಂದರು.
ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ನ ಸಾಧನೆ ಮತ್ತು ಬದ್ಧತೆ ಬಗ್ಗೆ ಅವರು ಮಾತನಾಡಿದರು.