ಗೌರವ ವಂದನೆ ಸ್ವೀಕರಿಸುತ್ತಿರುವ ಬೀರೇಂದರ್ ಸಿಂಗ್
ನವದೆಹಲಿ: ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಹಾಗೂ ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಅವರು ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.
ಇಂದು ಮಧ್ಯಾಹ್ನ ನಿರ್ಗಮಿತ ಸೇನಾ ಮುಖ್ಯಸ್ಥರಾದ ದಲ್ಬಿರ್ ಸಿಂಗ್ ಸುಹಾಗ್ ಹಾಗೂ ವಾಯುಪಡೆ ಮುಖ್ಯಸ್ಥ ಅರೂಪ್ ರಹಾ ಅವರು ಎರಡು ಪಡೆಗಳ ಅಧಿಕಾರವನ್ನು ಹಸ್ತಾಂತರಿಸಿದರು.
ಕೇಂದ್ರ ಸರ್ಕಾರ ಹಿರಿಯರಾದ ಲೆ.ಜನರಲ್ ಪ್ರವೀಣ್ ಬಕ್ಷಿ ಮತ್ತು ಲೆ. ಜನಲರ್ ಪಿಎಂ ಹರಿಜ್ ಅವರನ್ನು ಬದಿಗೆ ಸರಿಸಿ, ಸೇನೆಯ ಉಪ ಮುಖ್ಯಸ್ಥರಾಗಿರುವ ರಾವತ್‌ರನ್ನು ಸೇನಾ ಮುಖ್ಯಸ್ಥರಾಗಿ ನೇಮಿಸಿದೆ.
ಪ್ರಸ್ತುತ ಭಾರತೀಯ ಸೇನೆ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸುವಲ್ಲಿ ರಾವತ್ ಸಿದ್ಧಹಸ್ತರಾಗಿರುವುದು ಅವರ ನೇಮಕಕ್ಕೆ ಕಾರಣ ಎಂದು ಹೇಳಲಾಗಿದೆ. ಭಯೋತ್ಪಾದನೆ ಹಾಗೂ ಪರೋಕ್ಷ ಯುದ್ಧ ಮತ್ತು ಈಶಾನ್ಯ ಭಾಗದಲ್ಲಿನ ಪರಿಸ್ಥಿತಿಯನ್ನು ಹೆಚ್ಚು ದಕ್ಷತೆಯಿಂದ ಬಿಪಿನ್ ರಾವತ್ ನಿಭಾಯಿಸಬಲ್ಲರು. ಯುದ್ಧ ಹಾಗೂ ಪಾಕಿಸ್ತಾನ ಜೊತೆಗಿನ ಎಲ್‌ಒಸಿ ಹಾಗೂ ಚೀನಾ ಜೊತೆಗಿನ ಎಲ್‌ಎಸಿ ಹಾಗೂ ಈಶಾನ್ಯದಲ್ಲಿನ ಸನ್ನಿವೇಶದಲ್ಲಿ ಹೆಚ್ಚು ಕಾರ್ಯಾಚರಣೆ ನಡೆಸಿದ ಅನುಭವ ಹೊಂದಿದ್ದಾರೆ.
ಇನ್ನು ಯುದ್ಧ ವಿಮಾನದ ಪೈಲಟ್ ಆಗಿದ್ದ ಏರ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಈಗಾಗಲೇ ವಾಯುಪಡೆ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಕಾರ್ಗಿಲ್ ಯುದ್ಧದ ಸಂದರ್ಭ ಸ್ವತಃ ಯುದ್ಧ ವಿಮಾನ ಚಲಾಯಿಸಿದ್ದರು. ಇದೇ ಪ್ರಥಮ ಬಾರಿಗೆ ಯುದ್ಧ ವಿಮಾನದಲ್ಲಿ ಪೈಲಟ್ ಆಗಿದ್ದವರು ವಾಯುಪಡೆ ಮುಖ್ಯಸ್ಥರಾಗುತ್ತಿದ್ದಾರೆ.