ನವದೆಹಲಿ: ನೋಟು ನಿಷೇಧವನ್ನು ಅತಿ ದೊಡ್ಡ ಹಗರಣ ಎಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನೋಟು ನಿಷೇಧದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
ನ.8 ರ ನಂತರ ಪ್ರಧಾನಿ ಮೋದಿ ಜಾಗತಿಕವಾಗಿ ನಗೆಪಾಟಲಿಗೀಡಾಗಿದ್ದಾರೆ, ಜಗತ್ತು ಮೋದಿ ಅವರನ್ನು ಹಾಸ್ಯ ಮಾಡುತ್ತಿದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಜಗತ್ತು ಗೌರವಿಸುತ್ತಿತ್ತು ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.
ಡಿ.31 ರಂದು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ ಭಾಷಣದ ಬಗ್ಗೆ ಬಿಜೆಪಿ ಹಾಗೂ ಆರ್ ಎಸ್ಎಸ್ ನ ಬೆಂಬಲಿಗರೂ ನಿರಾಶೆಗೊಂಡಿದ್ದಾರೆ. ನೋಟು ನಿಷೇಧದ ಬಗ್ಗೆ ಸ್ವಾಯತ್ತ ಸಂಸ್ಥೆಯಿಂದ ತನಿಖೆ ನಡೆಸಬೇಕು ಹಾಗೂ ಶ್ವೇತ ಪತ್ರ ಹೊರಡಿಸಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಶ್ವೇತ ಪತ್ರದಲ್ಲಿ ನ.8 ರ ನಂತರದ ಜಿಡಿಪಿ ಬೆಳವಣಿಗೆ ದರ, ಕೃಷಿ, ಕೈಗಾರಿಕಾ ಉತ್ಪಾದನೆಯ ಬಗ್ಗೆ ಮಾಹಿತಿ ನೀಡಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ.