ನವದೆಹಲಿ: ಅಸಹಿಷ್ಣುತೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಹರಿಹಾಯುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ಇದೀಗ ನರೇಗ ಯೋಜನೆ ಹಿಡಿದು ಮೋದಿ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (MGNREGA) ಯುಪಿಎ ಸರ್ಕಾರದ ವೈಫಲ್ಯ ಜ್ವಲಂತ ನಿದರ್ಶಕ್ಕೆ ಉದಾಹರಣೆಯಾಗಿದೆ ಎಂದು ಕಳೆದ ಬಜೆಟ್ ಅಧಿವೇಶನದಲ್ಲಿ ಹೇಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೀಗ ಅದೇ ಯೋಜನೆಯನ್ನು ಹೊಗಳುತ್ತಿದ್ದಾರೆ. ಇದು ಅವರ ರಾಜಕೀಯ ಬುದ್ಧಿವಂತಿಕೆಗೆ ಉಜ್ವಲ ಉದಾಹರಣೆಯಾಗಿದೆ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು, ನರೇಗಾ ಯೋಜನೆಯ ವೈಫಲ್ಯತೆ ಕಾಂಗ್ರೆಸ್ ಗೆ ಹಿಡಿದ ಕನ್ನಡಿ ಎಂದು ಹೇಳಿದ್ದ ಪ್ರಧಾನಿ ಅವರು ಇದೀಗ ಅದೇ ಯೋಜನೆಯನ್ನಿಡು ಹಾಡಿ ಹೊಗಳುತ್ತಿದ್ದಾರೆ. ಇದು ಅವರ ರಾಜಕೀಯ ಬುದ್ಧಿವಂತಿಕೆಗೆ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ನರೇಗಾ ಯೋಜನೆ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷೆಯ ರಾಜಕೀಯ ಕಾರ್ಯದರ್ಶಿಯಾಗಿರುವ ಅಹ್ಮದ್ ಪಟೇಲ್, ಉದ್ಯೋಗ ಸೃಷ್ಟಿಯಲ್ಲಿ ಖಾಸಗಿ ಕ್ಷೇತ್ರದಲ್ಲಾಗದ ಕೆಲಸವನ್ನು ನರೇಗಾ ಯೋಜನೆ ಮಾಡಿದೆ. ನರೇಗಾ ಯೋಜನೆ ಬಗ್ಗೆ ಮಾತನಾಡಿದ್ದವರು ಇಂದು ಇದೇ ಯೋಜನೆಯ ಯಶಸ್ಸನ್ನಿಡಿದು ಸಂಭ್ರಮವನ್ನಾಚರಿಸುತ್ತಿದ್ದಾರೆ. ನರೇಗಾ ಯೋಜನಯು ಸ್ವತಂತ್ರ್ಯ ಭಾರತದ ಅತ್ಯಂತ ಪರಿವರ್ತಕ ಯೋಜನೆಯಾಗಿದ್ದು, ಯೋಜನೆಯಿಂದ 182 ಮಿಲಿಯನ್ ರಷ್ಟು ಜನ ಇದರ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ನರೇಗಾ ಯೋಜನೆ ರಾಜ್ಯದ ಅಭಿವೃದ್ಧಿಯ ಬಗ್ಗೆ ನಮ್ಮಲ್ಲಿರುವ ಬದ್ಧತೆ ಪ್ರತಿಬಿಂಬಿಸುತ್ತದೆ. ನರೇಗಾ ಯೋಜನೆಯ ಯಶಸ್ಸಿಗಾಗಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ಯುಪಿಎದಲ್ಲಿರುವ ಎಲ್ಲಾ ಕಾಂಗ್ರೆಸ್ ನಾಯಕರು ಸಾಕಷ್ಟು ಪರಿಶ್ರಮವನ್ನು ಪಟ್ಟಿದೆ. ಇದರ ಯಶಸ್ಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಷ್ಟಪಟ್ಟು ಒಪ್ಪಿಕೊಳ್ಳಲೇಬೇಕಾಯಿತು. ಇದೀಗ ನರೇಗಾ ಯೋಜನೆಯಿಂದ ದೇಶ ಹೆಮ್ಮೆಯಿಂದ ಸಂಭ್ರವನ್ನಾಚರಿಸುತ್ತಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಸಂಸತ್ ಭವನದಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ್ದ ಪ್ರಧಾನಿಯವರು, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಹೇಳುವ ಸ್ಮಾರಕವೇ ನರೇಗಾ ಯೋಜನೆ. ಈ ಯೋಜನೆ ನಮ್ಮ ಅವದಿಯಲ್ಲೂ ಮುಂದುವರೆಯಲಿದೆ. ನಾನು ಯಾವುದೇ ಕಾರಣಕ್ಕೂ ನರೇಗಾ ಯೋಜನೆ ನಿಲ್ಲಿಸುವುದಿಲ್ಲ. ಅದಕ್ಕೆ ಮತ್ತಷ್ಟು ಮೌಲ್ಯಗಳನ್ನು ನೀಡಿ ಬಡಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದರು.