ಸೋನಿಯಾ ಗಾಂಧಿ- ರಾಹುಲ್ ಗಾಂಧಿ
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ನೀಡಲಾಗಿದ್ದ ಸಮನ್ಸ್ ಅನ್ನು ರದ್ದುಗೊಳಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಖುದ್ದು ಹಾಜರಾಗುವಂತೆ ಸೂಚಿಸಿ ಹೊರಡಿಸಿದ್ದ ಸಮನ್ಸ್ನ್ನು ರದ್ದು ಪಡಿಸುವಂತೆ ಕೋರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿ ಮತ್ತು ಇತರ ನಾಲ್ವರು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶದ ಎತ್ತಿಹಿಡಿದಿದ್ದು, ಅರ್ಜಿಗಳನ್ನು ವಜಾಗೊಳಿಸಿತ್ತು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಈ ಸಂಬಂಧ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ನ್ನು ಪ್ರಶ್ನಿಸಿ ರದ್ದು ಪಡಿಸುವಂತೆ ಕೋರಲಾಗಿದೆ.
ಅಲ್ಲದೇ, ನ್ಯಾಷನಲ್ ಹೆರಾಲ್ಡ್ ಅವ್ಯವಹಾರ ಪ್ರಕರಣದ ಪ್ರಮುಖ ಆರೋಪಿಗಳಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪಟಿಯಾಲ ಹೌಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿತ್ತು.
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
ನ್ಯಾಷನಲ್ ಹೆರಾಲ್ಡ್ ಎನ್ನುವುದು ಒಂದು ಇಂಗ್ಲಿಷ್ ದಿನಪತ್ರಿಕೆ. 1938 ಸೆ.9ರಂದು ಈ ಪತ್ರಿಕೆ ಲಖನೌನಲ್ಲಿ ಆರಂಭಗೊಂಡಿದ್ದು, ಜವಾಹರಲಾಲ್ ನೆಹರೂ ಅವರು ಆರಂಭಿಸಿದ್ದರು. ಕಾಂಗ್ರೆಸ್ ಪಕ್ಷದ ಮಾಲಕತ್ವದಲ್ಲಿ ಈ ಪತ್ರಿಕೆ ಹೊರಬರುತ್ತಿತ್ತು. ಜೊತೆಗೆ ಹಿಂದಿಯಲ್ಲಿ ನವಜೀವನ್, ಮತ್ತು ಉರ್ದುವಿನಲ್ಲಿ ಕ್ವಾಮಿ ಆವಾಜ್ ಎಂಬ ಸೋದರಿ ಪತ್ರಿಕೆಯೂ ಇತ್ತು. 2008ರಲ್ಲಿ ನ್ಯಾಷನಲ್ ಹೆರಾಲ್ಡ್ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಅದಕ್ಕೂ ಮುನ್ನ 1940ರಿಂದ 1979ರವರೆಗೆ ಇದು ಕಾರ್ಯಾಚರಿಸುತ್ತಿರಲಿಲ್ಲ. 2008ರಲ್ಲಿ ಕೊನೆಗೆ ಉಳಿದಿದ್ದ ದೆಹಲಿ ಆವೃತ್ತಿ ಕೂಡ ನಿಂತು ಹೋಗಿತ್ತು. ಪತ್ರಿಕೆ ಸಂಪೂರ್ಣ ಸ್ಥಗಿತವಾಗುವ ಮುನ್ನ ಅದರ ಆಡಳಿತವನ್ನು ನೋಡಿಕೊಳ್ಳುತ್ತಿದ್ದುದು ಅಸೋಸಿಯೇಟೆಡ್ ಜರ್ನಲ್ ಲಿ (ಎಜೆಎಲ್). ಬಳಿಕ ಇದು ರಿಯಲ್ ಎಸ್ಟೇಟ್ ಕಂಪನಿಯಾಗಿ ಬದಲಾಗಿತ್ತು. ಪತ್ರಿಕೆ ಸ್ಥಗಿತವಾಗುವ ವೇಳೆ ಅದರ ಮೇಲೆ 90 ಕೋಟಿ ರು. ಸಾಲದ ಹೊರೆ ಇತ್ತು. ಜೊತೆಗೆ ಪತ್ರಿಕೆಗೆ ದೆಹಲಿ, ಲಖನೌ ಮುಂಬೈಗಳಲ್ಲಿ ಆಸ್ತಿ ಇತ್ತು.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಒಡೆತನದ ಯಂಗ್ ಇಂಡಿಯನ್ ಎಂಬ ಸಂಸ್ಥೆಯು ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಯನ್ನು(ಎಜೆ) ಖರೀದಿ ಮಾಡಿದೆ. ಈ ಮೂಲಕ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಎಜೆಗೆ ಸೇರಿದ ಆಸ್ತಿಗಳೂ ಯಂಗ್ ಇಂಡಿಯನ್ ಕಂಪನಿಯ ಪಾಲಾಗಿವೆ. ಸುಬ್ರಮಣಿಯನ್ ಸ್ವಾಮಿ ಮಾಡುತ್ತಿರುವ ಆರೋಪವೇನೆಂದರೆ, ಪತ್ರಿಕೆಯನ್ನು ನಡೆಸುವ ಉದ್ದೇಶದಿಂದ ಈ ಸ್ಥಳಗಳನ್ನು ಅಸೋಸಿಯೇಟೆ ಜರ್ನಲ್ಸ್ ಕಂಪನಿಗೆ ನೀಡಲಾಗಿತ್ತು. ಆದರೆ, ಸೋನಿಯಾ ಮತ್ತು ರಾಹುಲ್ ಗಾಂಧಿ ಈ ಸ್ಥಳಗಳನ್ನು ಪತ್ರಿಕೆ ನಡೆಸುವ ಬದಲಾಗಿ ವಾಣಿಜ್ಯಾತ್ಮಕ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಸ್ವಾಮಿಯ ಮತ್ತೊಂದು ದೂರೆಂದರೆ, ಕಾಂಗ್ರೆಸ್ ಪಕ್ಷದ ನಿಧಿಯಿಂದ 90 ಕೋಟಿ ರೂಪಾಯಿ ಹಣವನ್ನು ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಗೆ ಶೂನ್ಯ ಬಡ್ಡಿದರದಲ್ಲಿ ಹಣ ವರ್ಗಾಯಿಸಲಾಗಿದೆ. ಇವೆಲ್ಲವೂ ಕಾನೂನು ಬಾಹಿರ ಎಂದು ಬಿಜೆಪಿ ಮುಖಂಡರು ಆಪಾದಿಸಿದ್ದರು.
2010ರಲ್ಲಿ ಎಜೆಎಲ್ ಅನ್ನು ಹೊಸ ಕಂಪನಿ ಯಂಗ್ ಇಂಡಿಯಾ ಲಿ (ವೈಐಎಲ್) ಖರೀದಿ ಮಾಡಿತ್ತು. ವೈಐಎಲ್ ಕಂಪನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಿರ್ದೇಶಕರಾಗಿದ್ದು ತಲಾ ಶೇ.38ರಷ್ಟು ಷೇರುಗಳನ್ನು ಹೊಂದಿದ್ದರು.
ಎಜೆಎಲ್ ಅನ್ನು ವೈಐಎಲ್ ಕಂಪನಿ ಖರೀದಿ ಮಾಡಿದ್ದರಲ್ಲಿ ವ್ಯಾಪಕ ಅವ್ಯವಹಾರವಾಗಿದೆ ಎಂದು ಮೊದಲು ಆರೋಪಿಸಿದ್ದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ. ಈ ಬಗ್ಗೆ ಅವರು 2012ರಲ್ಲಿ ದೆಹಲಿಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಎಜೆಎಲ್ ಅನ್ನು ಖರೀದಿಸುವ ವೇಳೆ ವೈಐಎಲ್ ಕಂಪನಿ ಎಜೆಎಲ್ ಜೊತೆಗೆ ಕಾಂಗ್ರೆಸ್ ಪಕ್ಷದಿಂದ 90 ಕೋಟಿ ರು. ಬಡ್ಡಿ ರಹಿತ ಸಾಲ ಪಡೆದುಕೊಂಡಿದೆ. ಆದಾಯ ತೆರಿಗೆ ಕಾನೂನು ಪ್ರಕಾರ, ರಾಜಕೀಯ ಪಕ್ಷವೊಂದು ಮೂರನೇ ಕಂಪನಿಗೆ ಸಾಲ ಕೊಡುವಂತಿಲ್ಲ. ಇಂತಿರ್ಪ ಎಜೆಎಲ್, ಐಎಎಲ್ ಮಧ್ಯೆ ಹಣದ ಅವ್ಯವಹಾರ ನಡೆದಿದೆ. ಎಜೆಎಲ್‌ಗೆ 90 ಕೋಟಿ ರೂ. ಸಾಲ ಕೊಡಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಮೊದಲು ಹೇಳಿದ್ದು, ಬಳಿಕ ಅದೇ ಎಜೆಎಲ್ ವೈಐಎಲ್ ಕಂಪನಿಗೆ ಸಾಲವಾಗಿ 50 ಲಕ್ಷ ರೂ. ನೀಡಿದ್ದಾಗಿ ಹೇಳಲಾಗಿದೆ. ಎಜೆಎಲ್ ಬಳಿ ದೆಹಲಿ, ಲಖನೌ ಮುಂತಾದೆಡೆ ಆಸ್ತಿ ಇದ್ದು ದೆಹಲಿಯಲ್ಲಿ ಪ್ರಮುಖ ಸ್ಥಳದಲ್ಲಿ ಕಟ್ಟಡವೂ ಇದೆ. ಅಲ್ಲದೇ ಎಜೆಎಲ್ ಬಳಿ 2 ಸಾವಿರ ಕೋಟಿ ರೂ.ಗಳ ರಿಯಲ್ ಎಸ್ಟೇಟ್ ಆಸ್ತಿ ಇತ್ತು. ಇದನ್ನು ವೈಐಎಲ್ ಕಂಪನಿ ಬಳಿಕ ತನ್ನ ಸ್ವಾಧೀನಕ್ಕೆ ಪಡೆದಿದೆ. ಇದನ್ನು ಪಡೆಯುವ ವೇಳೆ ಎಜೆಎಲ್‌ಗೆ ಕೇವಲ 90 ಕೋಟಿ ರು. ಪಾವತಿಸಿದ್ದಾಗಿ ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos