ತಿರುವನಂತಪುರ: ಗುಂಪು ಘರ್ಷಣೆಯೊಂದರಲ್ಲಿ ಸಾವನ್ನಪ್ಪಿದ ಮುಸ್ಲಿಂ ಯುವಕನೊಬ್ಬಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಿಂದೂ ದೇವಾಲಯವೊಂದು ಮೂರು ದಿನಗಳ ಕಾಲ ತನ್ನ ಪೂಜಾ ಕೈಂಕರ್ಯವನ್ನು ನಿಲ್ಲಿಸಿದ ಘಟನೆ ಸಂಭವಿಸಿದೆ.
ಭಾನುವಾರ ಎಂ.ವಿ. ಶಬೀರ್ ಎಂಬ ಯುವಕನನ್ನು ಗುಂಪು ಘರ್ಷಣೆ ವೇಳೆಯಲ್ಲಿ ಗುಂಪೊಂದು ದೊಣ್ಣೆಗಳಿಂದ ಥಳಿಸಿ ಗಾಯಗೊಳಿಸಿತ್ತು. ದಾರಿಯಲ್ಲಿ ಬಿದ್ದಿದ್ದ ಆತನನ್ನು ದಾರಿಹೋಕರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದ. ಈ ಹಲ್ಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಏಟು ತಿನ್ನುತ್ತಿದ್ದ ವ್ಯಕ್ತಿಗೆ ನೆರವಾಗಲಿ ಎಂದು ಘಟನೆಯನ್ನು ಗಮನಿಸಿದ್ದ ವ್ಯಕ್ತಿಯೊಬ್ಬ ಮಾಡಿದ್ದ ವಿಡಿಯೋ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲೂ ಪ್ರಸಾರಗೊಂಡಿತ್ತು.
ಹಲ್ಲೆಯಲ್ಲಿ ಮೃತನಾದ ಶಬೀರ್ ತನ್ನ ಹುಟ್ಟೂರಿನ ಶಿವ ದೇವಾಲಯ ವಾರ್ಷಿಕ ಜಾತ್ರೆ ಸಂಘಟಿಸಲು ಪ್ರತಿವರ್ಷವೂ ಕಾಣಿಕೆ ಸಲ್ಲಿಸುವ ಮೂಲಕ ನೆರವಾಗುತ್ತಿದ್ದ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಶಿವ ದೇವಾಲಯದ ಪದಾಧಿಕಾರಿಗಳು ಶಬೀರ್ ಗೌರವಾರ್ಥ ದೇವಸ್ಥಾನದಲ್ಲಿ ಸೋಮವಾರ ಮತ್ತು ಮಂಗಳವಾರ ಶಂಖ ಮೊಳಗಿಸದೇ ಇರಲು ಮತ್ತು ಗಂಟೆ ಬಾರಿಸದೇ ಇರಲು ತೀರ್ಮಾನಿಸಿದರು. ವಾರದ ಉಳಿದ ಮೂರು ದಿನಗಳಲ್ಲಿ ಬೆಳಗಿನ ದರ್ಶನದ ಬಳಿಕದ ಪೂಜಾ ಕೈಂಕರ್ಯವನ್ನೂ ಸ್ಥಗಿತಗೊಳಿಸಿದರು ಎಂದು ವರದಿಗಳು ತಿಳಿಸಿವೆ.