ದೇಶ

ಉಮ್ಮನ್ ಚಾಂಡಿಯವರು ನನಗೆ ಚಿರಪರಿಚಿತರು: ಸರಿತಾ ನಾಯರ್

Rashmi Kasaragodu
ತಿರುವನಂತಪುರಂ: ಸೌರ ಫಲಕ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್, ತನಗೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಚಿರಪರಿಚಿತರು. ಅವರ ಮನೆಗೆ ನಾನು ಯಾವಾಗ ಬೇಕಾದರೂ ಹೋಗಿ ಬರುವ ಸ್ವಾತಂತ್ರ್ಯ ತನಗಿತ್ತು ಎಂದು ಹೇಳಿದ್ದಾರೆ.
ಶನಿವಾರ ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಸರಿತಾ, ಸೌರ ಫಲಕ ಹಗರಣಗದಲ್ಲಿ  ಚಾಂಡಿ ಕೂಡಾ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಚಾಂಡಿ, ತಾನು ಆಕೆಯನ್ನು ಮೂರೇ ಮೂರು ಬಾರಿ ಭೇಟಿಯಾಗಿದ್ದೆ ಎಂದು ಹೇಳಿದ್ದರು. ಚಾಂಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸರಿತಾ, ಅವರು ನನಗೆ ಚಿರಪರಿಚಿತರು. ಅವರ ಕುಟುಂಬದವರಿಗೂ ನನ್ನನ್ನು ಗೊತ್ತು. ಯಾವಾಗ ಬೇಕಾದರೂ ಅವರ ಮನೆಗೆ ಹೋಗಿ ಬರುವ ಸ್ವಾತಂತ್ರ್ಯ ನನಗಿತ್ತು ಎಂದಿದ್ದಾರೆ.
ಅಷ್ಟೇ ಅಲ್ಲ, 2012ರಲ್ಲಿ ತಾನು ಹಲವಾರು ಬಾರಿ ಚಾಂಡಿಯವರ ಪತ್ನಿಯನ್ನು ಕೂಡಾ ಭೇಟಿ ಮಾಡಿದ್ದೇನೆ ಎಂದು ಸರಿತಾ ಹೇಳಿದ್ದಾರೆ.
2013ರಲ್ಲಿ ಈಸ್ಟರ್ ಹಬ್ಬದ ಆಚರಣೆಯಲ್ಲಿ ಭಾಗವಹಿಸುವಂತೆ ಸ್ವತಃ ಚಾಂಡಿಯವರೇ ನನ್ನನ್ನು ಆಹ್ವಾನಿಸಿದ್ದರು. ಆದರೆ ನನಗೆ ಬೇರೆ ಕೆಲಸವಿದ್ದುದರಿಂದ ನಾನು ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂದಿದ್ದಾರೆ ಸರಿತಾ.
ಕಳೆದ ತಿಂಗಳು ಪ್ರಸ್ತುತ ಹಗರಣದ ಬಗ್ಗೆ ವಿಚಾರಣೆಯ ವೇಳೆ ತಾನು ಮುಖ್ಯಮಂತ್ರಿ ಚಾಂಡಿ ಅವರಿಗೆ ಥೋಮಸ್ ಕುರುವಿಳ ಎಂಬಾತನ ಮೂಲಕ ರು. 1.90 ಕೋಟಿ ಲಂಚವನ್ನು ಎರಡು ಬಾರಿ ಕಂತು ಮೂಲಕ ನೀಡಿದ್ದೆ. ಇಷ್ಟೇ ಅಲ್ಲದೆ, ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಕೂಡಾ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸರಿತಾ ಆರೋಪಿಸಿದ್ದರು.
SCROLL FOR NEXT