ಚೆನ್ನೈ: ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಕ್ರಮಗೊಳ್ಳಿ ಎಂದು ನ್ಯಾಯಾಧೀಶರಿಗೇ ಸವಾಲು ಹಾಕಿದ್ದ ವಕೀಲ ಡಬ್ಲ್ಯೂ ಪೀಟರ್ ರಮೇಶ್ ಕುಮಾರ್ ಅವರಿಗೆ ಫೆಬ್ರವರಿ 15 ರೊಳಗಾಗಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಮಧುರೈ ಹೈಕೋರ್ಟ್ ಸೂಚನೆ ನೀಡಿದೆ.
2015ರ ಸೆಪ್ಟೆಂಬರ್ 16ರಂದು ನ್ಯಾಯಾಲಯದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿತ್ತು. ಪ್ರಕರಣ ಸಂಬಂಧ ವಕೀಲ ಡಿ.ಸೆಲ್ವಂ ಎಂಬುವವರ ವಾದ ಮಂಡಿಸುತ್ತಿದ್ದರು. ಸೆಲ್ವಂ ಹಾಗೂ ಪೀಟರ್ ಅವರ ಮಧ್ಯೆ ಕೆಲವು ವಿಷಯಗಳ ಕುರಿತಂತೆ ಮನಸ್ತಾಪವಿತ್ತು. ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಪೀಟರ್ ಕೂಡ ಹಾಜರಿದ್ದರು. ಸೆಲ್ವಂ ಮಂಡಿಸುತ್ತಿದ್ದ ವಾದವನ್ನು ಕಂಡು ವಿಚಾರಣೆ ಸಂದರ್ಭದಲ್ಲಿ ಪೀಟರ್ ಮಧ್ಯೆ ಪ್ರವೇಶಿಸಿ ಮಾತನಾಡಲು ಆರಂಭಿಸಿದ್ದರು.
ಈ ವೇಳೆ ನ್ಯಾಯಾಧೀಶಯರು ನಿಮ್ಮ ನಡುವೆ ಏನೇ ಇದ್ದರು ಅದನ್ನು ಹೊರಗಡೆ ಇಟ್ಟುಕೊಳ್ಳಿ. ನ್ಯಾಯಾಲಯಕ್ಕೆ ತೊಂದರೆ ಕೊಡುವ ಕೆಲಸ ಯಾರೂ ಮಾಡಬಾರದು ಎಂದು ಹೇಳಿದ್ದರು. ಈ ವೇಳೆ ನ್ಯಾಯಾಧೀಶರ ವಿರುದ್ಧ ಕೆಂಡಾಮಂಡಲವಾದ ಪೀಟರ್ ನಿಮಗೆ ಧೈರ್ಯವಿದ್ದರೆ. ನನ್ನ ವಿರುದ್ಧ ಕೈಗೊಳ್ಳಿ ಎಂದು ನ್ಯಾಯಾಧೀಶರಿಗೆ ಸವಾಲಿ ಹಾಕಿದ್ದರು. ಅಲ್ಲದೆ, ಕೆಲವು ವಕೀಲರನ್ನು ಕರೆತಂದು ನ್ಯಾಯಾಲಯದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ನ್ಯಾಯಾಲಯದ ಕಾರ್ಯನಿರ್ವಹಿಸುತ್ತಿರುವ ವೇಳೆ ನ್ಯಾಯಾಧೀಶರಿಗೆ ಈ ರೀತಿಯ ಸವಾಲು ಹಾಕಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಪೀಟರ್ ವಿರುದ್ಧ ನ್ಯಾಯಾಲಯ ನಿಂದನೆ ಆರೋಪದಡಿ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಳ್ಳಲಾಗಿತ್ತು. ಇದೀಗ ಪ್ರಕರಣ ಸಂಬಂಧ ಫೆ.15 ರಂದು ವಿಚಾರಣೆ ನಡೆಯಲಿದ್ದು, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಪೀಟರ್ ಅವರಿಗೆ ನ್ಯಾಯಾಲಯ ಸೂಚನೆ ನೀಡಿದೆ.